ಮತದಾನ ಮಾಡಲು ಈ ದಾಖಲೆಗಳನ್ನು ಕೊಂಡೊಯ್ಯಿರಿ

ಮೈಸೂರು: ಏ.18ರಂದು ಬೆಳಿಗ್ಗೆ 7 ರಿಂದ ಸಂಜೆ 6ಗಂಟೆವರೆಗೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು.

ಒಂದು ವೇಳೆ ಅದು ಇಲ್ಲದಿದ್ದಲ್ಲಿ ಈ ಕೆಳಕಂಡ 11 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಭಾವಚಿತ್ರವಿರುವ ಪಾಸ್‍ಪೋರ್ಟ್, ಡಿಎಲ್, ಸರ್ಕಾರಿ ಅಥವಾ ಖಾಸಗಿ ಉದ್ಯಮ ಸಂಸ್ಥೆಗಳ ಗುರುತಿನ ಚೀಟಿ, ಬ್ಯಾಂಕ್-ಅಂಚೆ ಕಚೇರಿ ಪಾಸ್‍ಬುಕ್, ಪಾನ್‍ಕಾರ್ಡ್, ಆರ್‍ಜಿಪಿ ವಿತರಿಸಿರುವ ಸ್ಮಾರ್ಟ್ ಕಾರ್ಡ್, ನರೇಗಾ ಯೋಜನೆಯ ಉದ್ಯೋಗ ಕಾರ್ಡ್, ಆರೋಗ್ಯ ವಿಮಾ ಕಾರ್ಡ್, ಪಿಂಚಣಿ ಆದೇಶ, ಜನಪ್ರತಿನಿಧಿ ಗಳಿಗೆ ನೀಡಿರುವ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ಇವುಗಳಲ್ಲಿ ಯಾವುದಾದ ರೊಂದನ್ನು ತೋರಿಸಿ ಮತ ಚಲಾಯಿಸಿ.

ಅಭ್ಯರ್ಥಿಗಳ ಬೂತ್‍ಗಳು: ಮತಗಟ್ಟೆಗಳಿಂದ 200 ಮೀಟರ್ ದೂರದಲ್ಲಿ ಬೂತ್‍ಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡಿದ್ದು, ಅಲ್ಲಿ ಮತದಾರರ ಭಾಗದ ಸಂಖ್ಯೆ ಮುಂತಾದ ಮಾಹಿತಿಯನ್ನು ನೀಡಬಹುದಾಗಿದೆ. ಏಜೆಂಟ್ ನೇಮಕ : ಮತಗಟ್ಟೆಗೊಬ್ಬರಂತೆ ಅಭ್ಯರ್ಥಿಗಳು ಮತದಾನ ಏಜೆಂಟ್‍ರನ್ನು ನೇಮಿಸಿ ಕೊಳ್ಳಬಹುದು. ಅವರು ಮತಗಟ್ಟೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.