ಅಂತೂ ತಮಿಳ್ನಾಡು ಪುಂಡಾನೆ ಸೆರೆ

ಗುಂಡ್ಲುಪೇಟೆ, ಅ.24(ಸೋಮ್.ಜಿ)-ಬಂಡೀಪುರ ರಾಷ್ಟ್ರೀಯ ಉದ್ಯಾನವ ನದ ವ್ಯಾಪ್ತಿಯ ಶಿವಪುರ ಮತ್ತು ಹಂಗಳ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಮೂರು ಹಸುಗಳನ್ನು ಕೊಂದು ಅಟ್ಟಹಾಸ ಮೆರೆಯುತ್ತಿದ್ದ ತಮಿಳು ನಾಡಿನ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.

ಕಳೆದ ಮಂಗಳವಾರ ಮಧ್ಯಾಹ್ನ ಶಿವಪುರ ಸಮೀಪದ ಕಲ್ಲು ಕಟ್ಟೆಹಳ್ಳದಲ್ಲಿ ಕಾಣಿಸಿಕೊಂಡು ರೈತ ಸಿದ್ದಯ್ಯ ಹಾಗೂ ಹಂಗಳ ಸಮೀಪ ಆಲತ್ತೂರು ಸ್ವಾಮಿ ಎಂಬ ಯುವಕನ ಮೇಲೆ ದಾಳಿ ನಡೆಸಿದ ಪುಂಡಾನೆ ಅವರನ್ನು ಗಂಭೀರ ಗಾಯಗೊಳಿಸಿತ್ತು. ಹಾಗೆಯೇ ಶಿವಪುರ ಮಾರ್ಗವಾಗಿ ಹಂಗಳಪುರ ಮತ್ತು ಹಂಗಳ ಗ್ರಾಮಕ್ಕೆ ಬರುವಷ್ಟರಲ್ಲಿ ದಾರಿಯಲ್ಲಿ ಸಿಕ್ಕ ಮೂರು ಹಸುಗಳನ್ನು ತಿವಿದು ಸಾಯಿಸಿತ್ತು. ನಂತರ ಹಂಗಳ ದೊಡ್ಡಕೆರೆಯಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದು, ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಶುರು ಮಾಡುವಷ್ಟರಲ್ಲಿ ಮರೆಯಾಗಿತ್ತು. ನಂತರ ಬುಧವಾರ ಬೆಳಿಗ್ಗೆಯಿಂದಲೇ ಐದು ಸಾಕಾನೆಗಳ ನೆರವಿನೊಂದಿಗೆ 30ಕ್ಕೂ ಹೆಚ್ಚು ಸಿಬ್ಬಂದಿ ಆನೆಯ ಹುಡು ಕಾಟ ಆರಂಭಿಸಿದ್ದರು. ಆದರೂ ಪತ್ತೆಯಾ ಗಿರಲಿಲ್ಲ. ಇದರಿಂದಾಗಿ ಅರಣ್ಯ ಅಧಿಕಾರಿ ಗಳು ಈ ಭಾಗದಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಆನೆ ಕಂಡರೆ ತಕ್ಷಣವೇ ಮಾಹಿತಿ ನೀಡಿ ಎಂದು ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿದ್ದರು.

ಗುರುವಾರ ಬೆಳಿಗ್ಗೆ ಪಾರ್ವತಿ ಬೆಟ್ಟದ ಕಂದೇಗಾಲ ಸಮೀಪ ಆನೆ ಇದೆ ಎಂಬ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಕಾರ್ಯಾಚರಣೆ ಆರಂಭಿಸಿದರು.

ಮತ್ತೆ ಅಟ್ಟಹಾಸ ಮೆರೆದ ಪುಂಡಾನೆ: ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಪರಮಾಪುರದಿಂದ ಪಡಗೂರು ಕಲ್ಲಹಳ್ಳಿ ಗ್ರಾಮದತ್ತ ಸಾಗುತ್ತಿದ್ದ ಈ ಆನೆಯು ರಸ್ತೆ ಯಲ್ಲಿ ಕಾರಿನ ಮೇಲೆ ದಾಳಿಗೆ ಮುಂದಾ ಗಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿತು. ನಂತರ ದಾರಿ ಯುದ್ದಕ್ಕೂ ತನ್ನ ಪುಂಡಾಟ ನಡೆಸುತ್ತಾ ಸಾಗಿದ ಆನೆ ಇಂಗಲವಾಡಿ-ಬನ್ನಿತಾಳ ಪುರ ರಸ್ತೆಯಲ್ಲಿ ನಿಲ್ಲಿಸಿದ್ದ 2 ಬೈಕುಗಳನ್ನು ಜಖಂಗೊಳಿಸಿತು. ಇದನ್ನು ನೋಡುತ್ತಿದ್ದ ಜನರ ಗುಂಪಿನತ್ತ ನುಗ್ಗಲು ಮುಂದಾಗುತ್ತಾ ಎಲ್ಲರಲ್ಲಿ ಆತಂಕವುಂಟು ಮಾಡಿತ್ತು.

ಅರವಳಿಕೆ ಮದ್ದಿಗೂ ಜಗ್ಗದ ಗಜ: ಅರಣ್ಯ ಇಲಾಖೆಯ ಪಶುವೈದ್ಯ ಡಾ. ನಾಗರಾಜು ಪುಂಡಾನೆಗೆ ಅರವಳಿಕೆ ಮದ್ದು ಹಾಕಿದರೂ ಯಾವುದೇ ಪ್ರಯೋಜನ ವಾಗಲಿಲ್ಲ. ತನಗೆ ಏನೂ ಆಗಿಲ್ಲವೆಂಬಂತೆ ರಾಜಾರೋಷವಾಗಿ ಮತ್ತೆ ತನ್ನ ಪುಂಡಾಟ ಮೆರೆಯುತ್ತಾ ಸಂಗೇಗೌಡನಹಳ್ಳಿ ಮಾರ್ಗವಾಗಿ ಪಡಗೂರಿನತ್ತ ಸಾಗುತ್ತಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಹಿಂಬಾಲಿ ಸಿದರು. ನಂತರ ಪಡಗೂರು ಗ್ರಾಮದ ಪ್ರಸಾದ್ ಎಂಬುವರ ಜಮೀನಿನಲ್ಲಿ ಸ್ಪಲ್ಪ ಮಂಕಾಗಿ ನಿಂತ ಪುಂಡಾನೆಯನ್ನು ದಸರಾ ಆನೆಗಳಾದ ಅಭಿಮನ್ಯು, ಪಾರ್ಥಸಾರಥಿ, ಗೋಪಾಲಕೃಷ್ಣ ಮತ್ತು ಗಣೇಶ ತಂಡ ಸುತ್ತುವರೆದವು. ಈ ಸಂದರ್ಭದಲ್ಲಿ ಪ್ರತಿ ರೋಧ ತೋರಿದ ಪುಂಡಾನೆಗೆ ವೈದ್ಯರು ಮತ್ತೊಂದು ಡೋಸ್ ಅರವಳಿಕೆ ಇಂಜೆಕ್ಷನ್ ಹಾಕಿ ನಿಯಂತ್ರಿಸಿದರು. ನಂತರ ಸಕಾನೆ ಗಳ ನೆರವಿನಿಂದ ಸೆರೆ ಹಿಡಿಯಲಾಯಿತು.

ದುಬಾರೆಗೆ ರವಾನೆ: ಈ ಪುಂಡಾನೆಯನ್ನು ಕ್ರೈನ್ ಮೂಲಕ ಲಾರಿಗೆ ಹಾಕಿ ಕೊಡಗಿನ ದುಬಾರೆಯಲ್ಲಿರುವ ಆನೆ ಕ್ಯಾಂಪಿಗೆ ಸ್ಥಳಾಂತರಿಸಲಾಯಿತು. ಇದರೊಂದಿಗೆ ಇಲ್ಲಿನ ಜನ ನಿಟ್ಟುಸಿರುಬಿಟ್ಟರು.