ಮೈಸೂರು,ಜೂ.29(ಎಸ್‍ಪಿಎನ್)-`ಅಂತರ ಘಟಕ ವರ್ಗಾವಣೆ’ ರದ್ದುಗೊಳಿಸುವಂತೆ ಒತ್ತಾಯಿಸಿ ಕೌನ್ಸಿಲಿಂಗ್ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚುವರಿ ಪ್ರೌಢ ಶಾಲಾ ಶಿಕ್ಷಕರು `ಡಮ್ಮಿ ಕೌನ್ಸಿಲಿಂಗ್’ ಹೆದರಿ ಪ್ರತಿಭಟನೆ ಕೈಬಿಟ್ಟು ಶನಿವಾರ ಸಂಜೆ ಕೌನ್ಸಿಲಿಂಗ್‍ಗೆ ಹಾಜರಾದರು.
ಪದನಿಮಿತ್ತ ಸಹ ಉಪನಿರ್ದೇಶಕರ ಕಚೇರಿ ಬಳಿ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಬೆಂಬಲದೊಂದಿಗೆ ಹೆಚ್ಚು ವರಿ ಪ್ರೌಢಶಾಲಾ ಶಿಕ್ಷಕರು ಇಂದು ಬೆಳಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚುವರಿ ಶಿಕ್ಷಕರನ್ನು ಮೂರು ಬಾರಿ ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಮೈಕ್ ಮೂಲಕ ಮನವಿ ಮಾಡಿದರು.
ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ಮುಂದುವರೆಸಿದ್ದ ಶಿಕ್ಷಕರಿಗೆ ಬಿಸಿ ಮುಟ್ಟಿಸಲು `ಡಮ್ಮಿ ಕೌನ್ಸಿಲಿಂಗ್’ ಮೂಲಕ 13 ಮಂದಿ ಶಿಕ್ಷಕರನ್ನು ಉಡುಪಿ ಜಿಲ್ಲೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದರು. ಇದಕ್ಕೆ ಹೆದರಿದ ಇತರೆ ಕೆಲವು ಶಿಕ್ಷಕರು ಪ್ರತಿಭಟನೆ ಕೈಬಿಟ್ಟು ಕೌನ್ಸಿಲಿಂಗ್ ಹಾಜರಾದರೆ, ಮತ್ತೆ ಕೆಲವರು ಕೆಎಟಿಗೆ ತೆರಳುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.
ಹೆಚ್ಚುವರಿ ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳು: ಹೆಚ್ಚುವರಿ ಶಿಕ್ಷಕರನ್ನು ಆಯಾಯ ಜಿಲ್ಲೆಯಲ್ಲೇ ಸ್ಥಳ ನಿಯುಕ್ತಿಗೊಳಿಸಬೇಕು. ಟಿಡಿಎಸ್ ಸಮಸ್ಯೆಗೆ ಪರಿಹಾರ ಒದಗಿಸಬೇಕು. ವಸತಿ ಪ್ರೌಢಶಾಲೆಗಳಲ್ಲಿ ಅಳವಡಿಸಿರುವ 40:1 ಶಿಕ್ಷಕರ ಅನುಪಾತದಲ್ಲಿ ಸಾಮಾನ್ಯ ಪ್ರೌಢಶಾಲೆಗಳಲ್ಲಿ ಇದೇ ನೀತಿ ಜಾರಿಗೆ ತರಬೇಕು. ಪ್ರೌಢಶಾಲೆ ಶಿಕ್ಷಕರಿಗೆ ಕಾಲಕಾಲಕ್ಕೆ ಬಡ್ತಿ ನೀಡಬೇಕು. ಆರ್‍ಟಿಐ ಕಾಯ್ದೆ ಸರ್ಕಾರಿ ಶಾಲೆಗಳ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಗೊಳಿಸಿ, ಮೀಸಲಿಟ್ಟ ಅನುದಾನವನ್ನು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಉಪಯೋಗಿಸಬೇಕೆಂಬ ಬೇಡಿಕೆಯನ್ನಿಟ್ಟು ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದರು.