ಮಗನ ಆರೋಗ್ಯಕ್ಕಾಗಿ ದೇಗುಲಕ್ಕೆ ತೆರಳಿದ್ದ ತಾಯಿ ಮರಳಿ ಬಂದದ್ದು ಶವವಾಗಿ..!

ಚಾಮರಾಜನಗರ:  ಮಗನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಲು ಮಾರಮ್ಮನ ದೇವಸ್ಥಾನಕ್ಕೆ ತೆರಳಿದ್ದ ತಾಯಿ ಮತ್ತೆ ಬಂದದ್ದು ಶವವಾಗಿ.
ಇಂದು ಮೃತರಾದ ಸಾಲಮ್ಮ ಸಾವಿನ ಹಿಂದೆ ಮಗನ ಆರೋಗ್ಯದ ಹರಕೆಯ ಸಂಗತಿ ಅಡಗಿದೆ.

ಸಾಲಮ್ಮನ ಮಗ ವೆಟ್ರಿವೇಲು ಕಾಲು ಊತ, ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು, ಈ ಸಮಸ್ಯೆಯಿಂದ ತನ್ನ ಮಗನನ್ನು ಕಾಪಾಡು ಮಾರಮ್ಮ ಎಂದು ಬೇಡಿಕೊಳ್ಳಲು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನಕ್ಕೆ ಸಾಲಮ್ಮ ತೆರಳಿದ್ದರು. ಈ ವೇಳೆ ಅಲ್ಲಿ ನೀಡಿದ ವಿಷ ಪ್ರಸಾದ ಸೇವಿಸಿ ಈಗ ಮೃತಪಟ್ಟಿದ್ದಾಳೆ.

ತನ್ನ ತಾಯಿ ಮೃತಪಟ್ಟಿರುವ ವಿಷಯ ತಿಳಿದ ವೆಟ್ರಿವೇಲುವಿನ ರೋಧನೆ ಮುಗಿಲು ಮುಟ್ಟಿದೆ. 4 ತಿಂಗಳ ಹಿಂದಷ್ಟೇ ವೆಟ್ರಿವೇಲು ತಂದೆ ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಈಗ ತಾಯಿಯೂ ಮೃತಪಟ್ಟಿರುವುದರಿಂದ ವೆಟ್ರಿ ವೇಲು ಈಗ ಅನಾಥನಾಗಿದ್ದಾನೆ. ಮುಂದೇನು ಎಂಬ ಚಿಂತೆ ಆತನಲ್ಲಿ ಆವರಿಸಿದ್ದು ಎದ್ದು ಕಂಡಿತು. ಸಾಲಮ್ಮ ಬಿದರಹಳ್ಳಿಯವರಾಗಿದ್ದು, ಇದೇ ಗ್ರಾಮದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಗ್ರಾಮದಲ್ಲಿ ಈಗ ದುಃಖ ಮಡುಗಟ್ಟಿದ್ದು ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

ಅಂದು ತಾಯಿ, ಇಂದು ಪತ್ನಿ ಸಾವು
ಹನೂರು: ಮಾರಮ್ಮ ದೇವಸ್ಥಾನದ ಪ್ರಸಾದ ಸೇವನೆಯಿಂದ ಮೃತಪಟ್ಟವರ ಸಂಖ್ಯೆ ದಿನೆದಿನೇ ಏರಿಕೆಯಾಗುತ್ತಿದ್ದು, ಎಂಜಿ ದೊಡ್ಡಿ ಗ್ರಾಮದ ಮುರುಗೇಶ್ ಎಂಬುವರು ಈ ದುರಂತದಲ್ಲಿ ತಾಯಿ ಮತ್ತು ಪತ್ನಿ ಕಳೆದುಕೊಂಡಿದ್ದಾರೆ. ಶನಿವಾರ ತಾಯಿಯನ್ನು ಕಳೆದುಕೊಂಡಿದ್ದ ಅವರು, ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಮಗೇಶ್ವರಿ(35) ಅವರನ್ನೂ ಕಳೆದುಕೊಂಡಿದ್ದಾರೆ.

ಮುರುಗೇಶ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಮೊನ್ನೆ ನಡೆದ ದುರಂತದಲ್ಲಿ ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ಇಡೀ ಕುಟುಂಬವೇ ಕಂಗಾಲಾಗಿದೆ.

ಮಗೇಶ್ವರಿ ಅವರು ಓಂ ಶಕ್ತಿ ವೃತಧಾರಿಯಾಗಿದ್ದು, ಭಾನುವಾರ ತಮಿಳುನಾಡಿಗೆ ಹೋಗಬೇಕಿತ್ತು. ಅಲ್ಲಿಗೆ ತೆರಳುವ ಮುನ್ನ ಶುಕ್ರವಾರ ಸುಳ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಮನೆಗೆ ಬಂದಿದ್ದಾರೆ. ಬಳಿಕ ಕೆಲ ಕ್ಷಣಗಳಲ್ಲೇ ವಾಂತಿ ಮಾಡಲು ಪ್ರಾರಂಭಿಸಿದಾಗ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ತಾಯಿ ಹಾಗೂ ಪತ್ನಿಯನ್ನು ಕಳೆದುಕೊಂಡ ಪತಿ ಮುರುಗೇಶ್ ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಶವವನ್ನು ಗ್ರಾಮಕ್ಕೆ ತರುತ್ತಿದ್ದಂತೆ ತುರ್ತು ವಾಹನಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಶವವನ್ನು ತಬ್ಬಿ ಹಿಡಿದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.