ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ತೆರಾಪಂಥ್ ಯುವಕ ಪರಿಷತ್ ಸಿದ್ಧ

ಮೈಸೂರು: ಅಖಿಲ ಭಾರತೀಯ ತೆರಾಪಂಥ್ ಯುವಕ್ ಪರಿಷತ್, ಮೈಸೂರು ಶಾಖೆ ವತಿಯಿಂದ ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರದ ಕಿಟ್‍ಗಳನ್ನು ವಿತರಿಸಲಾಗಿದ್ದು, ಇನ್ನೂ ಹೆಚ್ಚಿನ ಸೇವೆ ನೀಡಲು ಸಂಘಟನೆ ಸಿದ್ಧವಿದೆ ಎಂದು ಸಂಘಟನೆಯ ಮೈಸೂರು ಶಾಖೆ ಅಧ್ಯಕ್ಷ ಮುಖೇಶ್ ಗೊಗ್ಲಿಯಾ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಅವಶ್ಯವಿರುವ ದಿನಬಳಕೆ ವಸ್ತುಗಳಾದ ಹೊದಿಕೆ, ಉಡುಪು, ಸೊಳ್ಳೆ ಪರದೆ, ಮೇಣದಬತ್ತಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಒಳ ಗೊಂಡ 800 ಪರಿಹಾರ ಕಿಟ್‍ಗಳನ್ನು ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ತರಿಗೆ ತಲುಪಿಸಲಾಗಿದೆ. ಇನ್ನೂ ಹೆಚ್ಚಿನ ಕಿಟ್ ವಿತರಿಸಲು ಸಿದ್ಧತೆ ನಡೆಸಿದ್ದು, ನೆರೆ ಸಂತ್ರಸ್ತರು ಅಥವಾ ಸಂಬಂಧಿಸಿದವರು ತಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಪರಿಷತ್ ನಲ್ಲಿ ವಿಪತ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ತೆರಾಪಂಥ್ ಟಾಸ್ಕ್ ಫೋರ್ಸ್ ವ್ಯವಸ್ಥೆ ಇದೆ. ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ತರ ಸಹಾಯಕ್ಕಾಗಿ ನಮ್ಮ ಟಾಸ್ಕ್ ಫೋರ್ಸ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ. ಸಹಾಯಕ್ಕಾಗಿ ಮೊ.ಸಂ. 9901135937, 9886501094, 9844363237 ಅನ್ನು ಸಂಪರ್ಕಿಸಬಹುದು ಎಂದರು. ಪರಿಷತ್‍ನ ಮಹಾವೀರ್‍ಜೀ ದೇರಾಸರಿಯಾ, ಪ್ರಮೋದ್‍ಜೀ ಮೆಹ್ತಾ ಗೋಷ್ಠಿಯಲ್ಲಿದ್ದರು.