ಪಾಲಿಕೆ 18ನೇ ವಾರ್ಡ್ ಉಪ ಚುನಾವಣೆ ನಾಲ್ಕೂ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಉಮೇದುವಾರಿಕೆ ವಾಪಸ್ ಪಡೆಯಲು ನಾಳೆ ಕಡೇ ದಿನ
ಮೈಸೂರು, ಜ. 29(ಆರ್‍ಕೆ)- ಫೆಬ್ರವರಿ 9 ರಂದು ನಡೆಯಲಿರುವ ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆಗೆ ಸ್ಪರ್ಧೆ ಬಯಸಿ ಸಲ್ಲಿಸಿರುವ ನಾಲ್ಕೂ ಅಭ್ಯರ್ಥಿಗಳ ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ಚುನಾವಣಾ ಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ.

ಮೈಸೂರಿನ ಆಕಾಶವಾಣಿ ಸರ್ಕಲ್‍ನಲ್ಲಿರುವ ಪಾಲಿಕೆ ವಲಯ ಕಚೇರಿ-4ರಲ್ಲಿ ಇಂದು ಬೆಳಿಗ್ಗೆ ನಾಮಪತ್ರಗಳನ್ನು ಪರಿಶೀಲಿಸಲಾಯಿತು ಎಂದು ತಿಳಿಸಿದರು. ನಾಮಪತ್ರ ವಾಪಸ್ ಪಡೆಯಲು ಜ.31 ಕಡೇ ದಿನವಾಗಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದೆ. ಬಿಜೆಪಿಯ ಬಿ.ವಿ. ರವೀಂದ್ರ, ಕಾಂಗ್ರೆಸ್ಸಿನ ಆರ್.ರವೀಂದ್ರಕುಮಾರ್, ಜೆಡಿಎಸ್‍ನ ಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಯಾಗಿ ಎಂ.ಶಿವಪ್ರಕಾಶ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯ ಎದ್ದಿರುವ ಶಿವಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ ಪಕ್ಷದ ಅಭ್ಯರ್ಥಿ ಬಿ.ವಿ.ರವೀಂದ್ರ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ಮೈಸೂರು ನಗರ ಬಿಜೆಪಿ ಮುಖಂಡರು ಶಿವಪ್ರಕಾಶ್‍ರೊಂದಿಗೆ ಸಮಾಲೋಚನೆ ನಡೆಸಿ ನಾಮಪತ್ರ ವಾಪಸ್‍ಗೆ ಮನವೊಲಿಸಲೆತ್ನಿಸುತ್ತಿದ್ದಾರೆ. ಫೆ.9 ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, 18ನೇ ವಾರ್ಡಿನ ವ್ಯಾಪ್ತಿಯ 11 ಮತಗಟ್ಟೆಗಳಲ್ಲಿಯೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. 6084 ಮಹಿಳೆಯರು ಸೇರಿ ಒಟ್ಟು 11,877 ಮತದಾರರು ಅಂದು ಹಕ್ಕು ಚಲಾಯಿಸಲಿದ್ದು, ಫೆ.11ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾಧಿಕಾರಿ ಶಿವೇಗೌಡ ಹಾಗೂ ಸಿಬ್ಬಂದಿಗಳು ಇಂದು ಮಧ್ಯಾಹ್ನ ವಾರ್ಡ್ ಸಂಖ್ಯೆ 18ರ ವ್ಯಾಪ್ತಿಗೆ ಬರುವ ಯಾದವಗಿರಿಯ ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.