ಪ್ರಜಾಪ್ರಭುತ್ವದ 4 ಅಂಗಗಳು ಭ್ರಷ್ಟಾಚಾರದಿಂದ ಕೂಡಿವೆ

ಮೈಸೂರು:  ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಸಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗ ವ್ಯವಸ್ಥೆಗಳು ಭ್ರಷ್ಟಾ ಚಾರದಿಂದ ತುಂಬಿ ಹೋಗಿವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿ ನಲ್ಲಿ ಏರ್ಪಡಿಸಿದ್ದ ಭಾರತದಲ್ಲಿ `ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ಗಳಿಕೆಯಲ್ಲಿ ತೃಪ್ತಿಯೇ ಇಲ್ಲ ಎನ್ನುವಷ್ಟು ಭ್ರಷ್ಟರಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದು ತಿಳಿಸಿದರು.

ಹಿಂದೆ ಪಾಶ್ಚಾತ್ಯರ ಸಂಸತ್ ಅಧಿವೇಶನಗಳಲ್ಲಿ ಪ್ರಜಾ ಪ್ರಭುತ್ವ ಮತ್ತು ದೇಶದ ವಿದ್ಯಮಾನಗಳ ಕುರಿತು ಗಂಭೀರ ಚರ್ಚೆಗಳಾಗುತ್ತಿದ್ದವು. ಆದರೆ ಇಂದು ಲೋಕಸಭೆ, ರಾಜ್ಯಸಭೆಗಳನ್ನು ನೋಡಿದರೆ ಬೇಸರ ಎನಿಸುತ್ತದೆ. 2016ರಲ್ಲಿ ಬೆಳಗಾವಿಯಲ್ಲಿ 14 ದಿನ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಯಾವೊಂದು ವಿಚಾರವೂ ಚರ್ಚೆಗೆ ಬಾರದೆ ಕಲಾಪ ಗದ್ದಲದಿಂದಾಗಿ ಒಂದು ದಿನವೂ ನಡೆಯಲಿಲ್ಲ. ಆದರೆ ಅಧಿವೇಶನಕ್ಕೆ 10 ಕೋಟಿ ರೂ. ವೆಚ್ಚವಾಗಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಆ ಸ್ಥಾನದಲ್ಲಿ ಕುಳಿತುಕೊಳ್ಳುವವರಿಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ಇದೊಂದು ದೊಡ್ಡ ದುರಂತವೇ ಹೌದು ಎಂದು ಬೇಸರದಿಂದ ನುಡಿದರು.

ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಹಗರಣಗಳ ಲ್ಲಿಯೂ ಅಧಿಕಾರಿಗಳ ಕೈವಾಡವಿದೆ. ನ್ಯಾಯಾಂಗ ದಲ್ಲಿ ಪ್ರಕರಣವೊಂದು ಇತ್ಯರ್ಥವಾಗಲು 15 ವರ್ಷ ಗಳೇ ಬೇಕು. ಪತ್ರಿಕಾರಂಗದಲ್ಲಿ `ಪೇಯ್ಡ್ ನ್ಯೂಸ್’ ಪರಿಕಲ್ಪನೆ ಜಾರಿಯಲ್ಲಿದೆ. ರಾಜಕಾರಣಿ, ಉದ್ಯಮಿಗಳ ಹಿಡಿತದಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ಹೊರ ಹಾಕಿದರು.

ಎಷ್ಟು ಹಣ ಗಳಿಸಿದರೂ ಪ್ರಯೋಜನವಿಲ್ಲ. ಈಗಿನ ರಾಜಕಾರಣಿಗಳಿಗೆ ಹಣಗಳಿಕೆಯಲ್ಲಿ ತೃಪ್ತಿಯಿಲ್ಲ. ಇಂತಿಷ್ಟು ಹಣ ಕೊಟ್ಟು ಅಧಿಕಾರಕ್ಕೆ ಬಂದಿದ್ದೇನೆಂದು ಅಧಿಕಾರಿಗಳು ಹೇಳುತ್ತಾರೆ. ಇವೆಲ್ಲವುಗಳ ಬಗ್ಗೆ ಯುವಜನತೆ ಅರಿತು ಮಾನವೀಯ ಗುಣ ಬೆಳೆಸಿ ಕೊಳ್ಳಬೇಕು ಎಂದರು.

ಇಂದು ಶಿಕ್ಷಣದಲ್ಲಿ ಮೌಲ್ಯ ಬೋಧನೆ ಕ್ಷೀಣಿಸಿದೆ. ಪಠ್ಯ ಪುಸ್ತಕದಲ್ಲಿ ನೀತಿ ಪಾಠಗಳು ಮರೆಯಾಗುತ್ತಿವೆ. ಮಾನವೀಯತೆ, ತೃಪ್ತಿ ವಿಚಾರವೇ ಇಲ್ಲ. ಇದರಿಂ ದಾಗಿ ಸಮಾಜದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಿಗದೆ ನಾಗಾಲೋಟದಲ್ಲಿ ಓಡುತ್ತಿದೆ. ಪಠ್ಯ ಪುಸ್ತಕದಲ್ಲಿ ಮೌಲ್ಯ, ನೀತಿ ಪಾಠ ಅಳವಡಿಸುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು.  ಕಾರ್ಯಕ್ರಮದಲ್ಲಿ ಯುಎಸ್‍ಎಐಡಿ ಸಲಹೆ ಗಾರ ಮತ್ತು ಎಂಜಿಪಿ ಸಂಸ್ಥಾಪಕ ಭಾಮಿ ವಿ.ಶೆಣೈ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಎಸ್.ಎನ್.ಲಕ್ಷ್ಮಿನಾರಾಯಣ, ಕಾಲೇಜು ಪ್ರಾಂಶುಪಾಲ ಕೆ.ಬಿ.ವಾಸುದೇವ ಉಪಸ್ಥಿತರಿದ್ದರು.