30 ಮಂದಿ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನ ಬಂಧನ

ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ 30 ಜನರನ್ನು ಬಲಿ ಪಡೆದಿದ್ದ ಬಸ್ ಚಾಲಕನನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಬಸ್ ಚಾಲಕ ಶಿವಣ್ಣ ಪೊಲೀಸರ ತನಿಖೆ ವೇಳೆ ಅಪಘಾತಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ಚಾಲಕ ಹೇಳಿದ್ದೇನು?: ನ.24 ರಂದು ಬೆಳಿಗ್ಗೆ ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತು. ಅದು ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ದುರದೃಷ್ಟವ ಶಾತ್ ಬಸ್ ನಾಲೆಗೆ ಉರುಳಿ ಬಿತ್ತು ಎಂದು ತಿಳಿಸಿದ್ದಾನೆ.

ನವೆಂಬರ್ 24 ರಂದು ವಿಸಿ ನಾಲೆಗೆ ಬಸ್ ಉರುಳಿಬಿದ್ದ ಪರಿಣಾಮ 30 ಜನ ಜಲಸಮಾಧಿಯಾಗಿದ್ದರು. ಚಾಲಕ ಶಿವಣ್ಣ, ನಿರ್ವಾಹಕ ಪಾಂಡು, ವದೇಸಮುದ್ರದ ಗಿರೀಶ್, ವಿದ್ಯಾರ್ಥಿ ಲೋಹಿತ್ ಸೇರಿದಂತೆ ನಾಲ್ಕು ಮಂದಿ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು. ಘಟನೆ ನಡೆದ ಬಳಿಕ ಬಸ್ ಚಾಲಕ ಶಿವಣ್ಣ ತಲೆಮರೆಸಿಕೊಂಡಿದ್ದ. ಘಟನೆಯ ಬಳಿಕ ವಾರದೊಳಗೆ ಬಸ್ ನಿರ್ವಾಹಕ ಪಾಂಡುನನ್ನು ಬಂಧಿಸಿದ ಪೊಲೀಸರು, ಚಾಲಕನ ಬಂಧüನ ಸಾಧ್ಯವಾಗಿರಲಿಲ್ಲ. ಕಳೆದ 15 ದಿನಗಳಿಂದ ತಲೆ ಮರೆಸಿ ಕೊಂಡಿದ್ದ ಬಸ್ ಚಾಲಕ ಶಿವಣ್ಣನನ್ನು ಕೊನೆಗೂ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್ ನೇತೃತ್ವದ ಪಾಂಡವಪುರ ಪೊಲೀಸರ ತಂಡ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಬೆಸ್ತರಕೊಪ್ಪಲಿನ ಸಂಬಂಧಿಕರ ಮನೆಯಲ್ಲಿ ನಿನ್ನೆ(ಭಾನುವಾರ) ಮುಂಜಾನೆ 4 ಗಂಟೆ ಸಮಯದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಶಿವಣ್ಣನನ್ನು ವಿಚಾರಣೆಗೆ ಒಳಪಡಿಸಿದ ನಂತರ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿ ಸಿದ ಪೊಲೀಸರು ಪಾಂಡವಪುರ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸೋಮವಾರ ಮಧ್ಯಾಹ್ನ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಪಾರಾಗಿದ್ದು ಹೇಗೆ?: “ನನಗೂ ಈಜು ಬರುತ್ತಿರಲಿಲ್ಲ. ಸ್ಥಳೀಯರಾದ ಅಂಕೇಗೌಡ ಎಂಬುವವರು ನನ್ನನ್ನು ರಕ್ಷಿಸಿದ್ದರು. ಸುಸ್ತಾಗಿದ್ದ ನನ್ನನ್ನು ಜಮೀನಿನ ಬಳಿ ಕೂರಿಸಿದ್ದರು. ಈ ವೇಳೆ ನಡೆದುಕೊಂಡೇ ಬಸರಾಳು ಗ್ರಾಮಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಿ ತಲೆಮರೆಸಿಕೊಂಡಿದ್ದಾಗಿ ಚಾಲಕ ಶಿವಣ್ಣ ಬಸ್ ಅಪಘಾತ ದಲ್ಲಿ ತಾನು ಬದುಕುಳಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಡೆಗೋಡೆ ನಿರ್ಮಾಣ: 30 ಜನರನ್ನು ಬಲಿ ಪಡೆದ ಕನಗನ ಮರಡಿ ಬಸ್ ದುರಂತದ ನಂತರ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ನಾಲೆಯ ಎಡಭಾಗ ದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೇ ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಆರಂಭಿಸಿದೆ. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚರಿಸುತ್ತಿದೆ.

ಗ್ರಾಮಸ್ಥರಿಂದ ಶಾಂತಿ ಹೋಮ: ಈ ನಡುವೆ ವದೇಸಮುದ್ರ ಮತ್ತು ಕನಗನಮರಡಿ ಗ್ರಾಮಸ್ಥರಲ್ಲಿ ಇನ್ನೂ ದುರಂತದ ಭಯದ ಛಾಯೆ ಹಾಗೆ ಉಳಿದಿದೆ. ಇದರಿಂದ ಪರಿಹಾರಕ್ಕಾಗಿ ಇದೇ ತಿಂಗಳ 21ಕ್ಕೆ ದುರಂತ ನಡೆದ ನಾಲೆಯ ಬಳಿ ಶಾಂತಿ ಹೋಮ ನಡೆಸಲು ಕನಗನಮರಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.