ಖದೀಮನ ಬಂಧನ, 1.86 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಮೈಸೂರಿನ ಲಷ್ಕರ್ ಪೊಲೀಸರು ಚಿನ್ನದ ಅಂಗಡಿ ಮತ್ತು ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ಬಂಧಿಸಿ, ಆತನಿಂದ 1.86 ಲಕ್ಷ ರೂ.ಮೌಲ್ಯದ 60 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಅಶೋಕ ರಸ್ತೆಯ ಜ್ಯೋತಿರಾಂ ಪಾಂಡುರಾಂ ಆರ್ನಮೆಂಟ್ಸ್ ಅಂಡ್ ಬುಲಿಯನ್ಸ್ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ವ್ಯಕ್ತಿಯೊಬ್ಬ 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಬಗ್ಗೆ ಲಷ್ಕರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಲಷ್ಕರ್ ಪೊಲೀಸರು ಮಾಹಿತಿ ಮೇರೆಗೆ ಆರೋಪಿ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಪುರ ಹೋಬಳಿ ಸಿಂಗರಾಜಪುರ ಗ್ರಾಮದ ಶಿವಮಾಧು ಬಿನ್ ಲೇಟ್ ಜವರೇಗೌಡ (42) ಎಂಬಾತನನ್ನು ಬಂಧಿಸಿದ್ದಾರೆ. ಆತ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕತ್ತಿನಿಂದ 20 ಗ್ರಾಂ ಚಿನ್ನದ ಸರ ಕಳವು ಮಾಡಿದ್ಧಾಗಿ ತಿಳಿಸಿದ್ದರ ಮೇರೆಗೆ ಆತನಿಂದ 1.86 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ವಶಪಡಿ ಸಿಕೊಂಡಿದ್ದು, ವಿಚಾರಣೆ ವೇಳೆ ಲಷ್ಕರ್ ಠಾಣೆ ಹಾಗೂ ದೇವರಾಜ ಠಾಣೆಯ ತಲಾ ಒಂದು ಪ್ರಕರಣದಲ್ಲಿ ಆತ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವರಾಜ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಲಷ್ಕರ್ ಠಾಣೆಯ ಇನ್ಸ್‍ಪೆಕ್ಟರ್ ಎನ್.ಮುನಿಯಪ್ಪ, ಪಿಎಸ್‍ಐ ಕುಮಾರಿ ಪೂಜಾ, ಪ್ರೊಬೇಷನರಿ ಪಿಎಸ್‍ಐ ಗೌತಮ್ ಗೌಡ, ಎಎಸ್‍ಐ ಎನ್.ಮಹದೇವಪ್ಪ, ಶ್ರೀನಿವಾಸ್, ಸಿಬ್ಬಂದಿ ಪರಶಿವ ಮೂರ್ತಿ, ಲೋಕೇಶ್, ಪ್ರದೀಪ್, ಮಂಜುನಾಥ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.