ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮೈಸೂರಲ್ಲಿ ವೈದ್ಯರಿಂದ ಕಪ್ಪು ಪಟ್ಟಿ ಧರಿಸಿ, ಡಿಸಿಗೆ ಮನವಿ ಸಲ್ಲಿಕೆ

ಮೈಸೂರು: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಎನ್‍ಆರ್‍ಎಸ್ ವೈದ್ಯಕೀಯ ಮಹಾ ವಿದ್ಯಾ ಲಯದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕಪ್ಪು ಪಟ್ಟಿ ಧರಸಿದ್ದ ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆಯ ಪದಾಧಿಕಾರಿಗಳು ಸಂಘದ ಅಧ್ಯಕ್ಷ ಡಾ.ಎಸ್.ಬಿ.ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ದೇಶದ ವೈದ್ಯ ಸಮೂಹ ಪಶ್ಚಿಮ ಬಂಗಾ ಲದ ಮುಷ್ಕರ ನಿರತ ವೈದ್ಯರ ಪರ ಇದ್ದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅದ ಕ್ಕಾಗಿ ಏಕರೂಪದ ಕಠಿಣ ಕಾನೂನು ಜಾರಿ ಗೊಳಿಸಿ, ವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಇದಕ್ಕೂ ಮೊದಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಭಾರತೀಯ ವೈದ್ಯ ಕೀಯ ಸಂಘದ ಮೈಸೂರು ಶಾಖೆ ಅಧ್ಯಕ್ಷ ಡಾ.ಎಸ್.ಬಿ.ಪ್ರಕಾಶ್, ಪಶ್ಚಿಮ ಬಂಗಾಳ ದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ತೀವ್ರ ವಾಗಿ ಖಂಡಿಸಿದರು. ಅಲ್ಲಿನ ವೈದ್ಯರು ರಕ್ಷಣೆಗಾಗಿ ಬೀದಿಗಿಳಿದಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಿದರೆ ಇತರೆ ಭಾಗಗಳ ಯಾವ ವೈದ್ಯರೂ ಆ ರಾಜ್ಯಕ್ಕೆ ಹೋಗಿ ಸೇವೆ ಸಲ್ಲಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಾ. ಎಂ.ಎಸ್.ಜಯಂತ್, ಡಾ.ಸುರೇಶ್, ಡಾ.ರುದ್ರಪ್ಪ, ಡಾ.ಸುಜಾತಾ ಎಸ್.ರಾವ್, ಡಾ.ಸಂಜಯ್ ಉಪಸ್ಥಿತರಿದ್ದರು.

ಕ್ಯಾಂಡಲ್ ಹಿಡಿದು ವೈದ್ಯರ ಪ್ರತಿಭಟನೆ
ಮೈಸೂರು: ಪಶ್ಚಿಮಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಮೈಸೂರಿನ ನೂರಾರು ವೈದ್ಯರು ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು. ಶುಕ್ರವಾರ ಸಂಜೆ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ವೈದ್ಯರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಲ್ಕತ್ತಾದಲ್ಲಿ ನಡೆದ ಹಲ್ಲೆಯಿಂದ ವೈದ್ಯರು ಗಾಯಗೊಂಡಿದ್ದಾರೆ. ಈ ಘಟನೆ ನಡೆದು 2 ದಿನಗಳು ಕಳೆದರೂ ಅಲ್ಲಿನ ರಾಜ್ಯ ಸರ್ಕಾರ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲಿನ ಸರ್ಕಾರ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡು ತ್ತಿದೆ. ಇದು ವೈದ್ಯಲೋಕದ ಮೇಲೆ ನಡೆಯುತ್ತಿರುವ ದೌರ್ಜನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳು ಹಾಗೂ ವೈದ್ಯರ ಮೇಲೆ ಹಲ್ಲೆ ಮಾಡುವುದು ಕಾನೂನಿಗೆ ವಿರುದ್ಧವಾದವು. ಆದರೆ, ದೇಶದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ ಎಂದರೆ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ ಎಂದರ್ಥ. ಮುಂದಿನ ದಿನಗಳಲ್ಲೂ ಇಂಥ ಘಟನೆಗಳು ನಡೆದರೆ ವೈದ್ಯರು ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಜತೆಗೆ ಮುಂದಿನ ಪೀಳಿಗೆ ವೈದ್ಯ ವೃತ್ತಿಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.