ಪ್ರಯಾಣಿಕರ ಸುರಕ್ಷತೆಗಾಗಿ ಮೈಸೂರು-ಚಾ.ನಗರ ರೈಲು ಹಳಿ ಬದಿಯ ದುರ್ಬಲ ಮರಗಳ ತೆರವು

ಮೈಸೂರು: ರೈಲು ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಮುಂಜಾಗ್ರತೆ ವಹಿಸಿರುವ ರೈಲ್ವೆ ಇಲಾಖೆಯು ಮೈಸೂರು ಮತ್ತು ಚಾಮರಾಜನಗರ ನಡುವಿನ ರೈಲು ಹಳಿಯ ಇಕ್ಕೆಲಗಳಲ್ಲಿರುವ ದುರ್ಬಲ ಮರಗಳನ್ನು ತೆರವುಗೊಳಿಸುತ್ತಿದೆ.

ಈ ಹಿಂದೆ ಕೆಲವೆಡೆ ಹಳಿ ಮೇಲೆ ಮರ ಉರುಳಿ ಬಿದ್ದು ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿರುವುದರಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆಯು, ರೈಲು ಹಳಿಯ ಎರಡೂ ಬದಿಗಳಲ್ಲಿರುವ ಒಣಗಿದ ಹಾಗೂ ದುರ್ಬಲ ಮರಗಳ ಗುರುತಿಸಿ ಅಂತಹ ಮರಗಳು ಹಾಗೂ ರೆಂಬೆಗಳನ್ನು ಕತ್ತರಿಸುವ ಕಾರ್ಯವನ್ನು ಆರಂಭಿಸಿದೆ.

ಮೈಸೂರಿನ ಮೇಟಗಳ್ಳಿಯಿಂದ ಚಾಮರಾಜಪುರಂ ರೈಲ್ವೆ ಸ್ಟೇಷನ್‍ವರೆಗೆ ಈಗಾಗಲೇ ನೀಲಗಿರಿ ಸೇರಿದಂತೆ ಇತರ ಹಲವು ಜಾತಿಯ ದುರ್ಬಲ ಮರಗಳನ್ನು ಕಡಿದು ಉರುಳಿಸಿದ್ದು, ಅವುಗಳ ತೆರವುಗೊಳಿಸುವ ಕೆಲಸ ಭರದಿಂದ ಸಾಗಿದೆ. ರೈಲ್ವೆ ಇಲಾಖೆಯ ಇಂಜಿನಿಯರಿಂಗ್ ವಿಭಾಗವು ಸಮೀಕ್ಷೆ ನಡೆಸಿ ಒಣಗಿದ ಹಾಗೂ ನಿತ್ರಾಣಗೊಂಡು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿದ್ದರು. ಈಗ ಅವುಗಳನ್ನು ಕಡಿದು ತೆರವುಗೊಳಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.