ಅಚ್ಚರಿಗೊಳ್ಳುತ್ತಲೇ ಮೊಬೈಲ್‍ನಲ್ಲಿ ವಿಡಿಯೊ ಚಿತ್ರೀಕರಿಸಿದ ಹಾಸನ ಜನತೆ
ಹಾಸನ: ಹಾಸನ ನಗರದ ನಾಗರಿಕರು ವಾರಾಂತ್ಯದ ದಿನವಾದ ಭಾನುವಾರ ನ್ಯಾಷನಲ್ ಜಿಯಾಗ್ರಫಿ ಟಿವಿ ಚಾನೆಲ್‍ನಲ್ಲಿ ಪ್ರಸಾರವಾಗುವಂತಹ ಅಪರೂಪದ ದೃಶ್ಯವನ್ನು ನೇರವಾಗಿ ವೀಕ್ಷಿಸಿ ಅಚ್ಚರಿಗೊಂಡರು. ನಾಗರಹಾವಿನ ಮಧ್ಯಾಹ್ನದ ಭೋಜನ ದೃಶ್ಯವನ್ನು ಕಣ್ತುಂಬಿಕೊಂಡರು.
ನಗರದಲ್ಲಿ ಮಾರುದ್ದದ ನಾಗರಹಾವೊಂದು ಕೊಳಕು ಮಂಡಲ ಹಾವನ್ನು ಇಡೀ ಆಗಿ ನುಂಗಿ ಹಸಿವು ಇಂಗಿಸಿಕೊಂಡಿದ್ದನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಚಕಿತರಾದರು. 6-7 ನಿಮಿಷಗಳ ಕಾಲ ನಡೆದ ಉರುಗರಾಯನ ಈ ಆಹಾರ ಸೇವನೆ ದೃಶ್ಯವನ್ನು ಮೊಬೈಲ್‍ಗಳಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟರು.
ಹಲವು ದಿನಗಳಿಂದ ಹಸಿದಿದ್ದ ನಾಗರಹಾವು ಆಹಾರ (ಇಲಿ, ಕಪ್ಪೆ, ಪಕ್ಷಿ, ಮೊಟ್ಟೆ) ಅರಸುತ್ತಿದ್ದಾಗ 3 ಅಡಿ ಉದ್ದದ ಕೊಳಕು ಮಂಡಲ ಕಣ್ಣಿಗೆ ಬಿದ್ದಿದೆ. ತನ್ನಷ್ಟೇ ಗಾತ್ರವಿದ್ದರೂ ಉದ್ದ ಕಡಿಮೆ ಇದ್ದ ಮಂಡಲ ಹಾವಿನ ಮೂತಿಗೇ ಬಾಯಿ ಹಾಕಿದ ನಾಗರಹಾವು, ಇಂಚಿಂಚಾಗಿ ನುಂಗುತ್ತಾ ಹೋಯಿತು. ಕೊಳಕು ಮಂಡಲ ಹಾವು ಮೊದಲಿಗೆ ಸ್ವಲ್ಪ ಪ್ರತಿರೋಧ ತೋರಿದರೂ, ಹಾವುಗಳ ಕುಲದ ರಾಜನಾದ ನಾಗರಹಾವಿನ ಶಕ್ತಿ ಸಾಮಥ್ರ್ಯದ ಮುಂದೆ ಅದರ ಆಟ ನಡೆಯಲಿಲ್ಲ. 6-7 ನಿಮಿಷಗಳಲ್ಲಿ ಕೊಳಕುಮಂಡಲ ಹಾವು ನಾಗರಹಾವಿನ ಉದರ ಸೇರಿಕೊಂಡಿತು.