ಮೈಸೂರು,ಜೂ.25(ಪಿಎಂ)- ದೇಶ ದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದಕ್ಕೆ ಕಾಂಗ್ರೆಸ್‍ಗೆ ಜನತೆ ಇಂದು ಚಕ್ರಬಡ್ಡಿ ಸಮೇತ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಮಾಜಿ ಕಾನೂನು ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು.
ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯ ಶೇಷಾದ್ರಿಪುರಂ ಕಾಲೇಜು ಸಭಾಂಗಣ ದಲ್ಲಿ ಕಾಲೇಜು ಮತ್ತು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಸುಧಾರಣಾ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ `ತುರ್ತು ಪರಿಸ್ಥಿತಿ ಹೇರಿಕೆ, ಸ್ಥಿರತೆಗೆ ತಡೆ ಹಾಗೂ ಪ್ರಜಾ ಪ್ರಭುತ್ವದ ಅಭಿವೃದ್ಧಿ:ಒಂದು ಅವಲೋಕನ’ ಕುರಿತಂತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುರ್ತು ಪರಿಸ್ಥಿತಿ ಭಾರತದ ಪ್ರಜಾ ಪ್ರಭುತ್ವದ ಕರಾಳ ಅಧ್ಯಾಯ. ತುರ್ತು ಪರಿಸ್ಥಿತಿ ಹೇರಿ ದೇಶದ ಜನತೆಯ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳ ಲಾಯಿತು. ನ್ಯಾಯಾಂಗದ ಅಧಿಕಾರ ವನ್ನು ಮೊಟಕುಗೊಳಿಸಲಾಯಿತು. ಅಧಿಕಾರ ದಾಹಕ್ಕಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಯಿಂದ ದೇಶದಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ತಮ್ಮ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಿ ಕೊಂಡಿದ್ದೇ ಅವರ ಸಾಧನೆಯಾಯಿತು. ಆದರೆ ಆ ಬಳಿಕ ನಡೆದ ಲೋಕಸಭೆಯ ಸಾರ್ವತ್ರಿಕ ಚುನಾ ವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದರು. ಇದೀಗ ಚಕ್ರಬಡ್ಡಿ ಸಮೇತ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ನುಡಿದರು.
1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭ್ರಷ್ಟಾಚಾರ ನಡೆಸಿದ್ದಾರೆಂಬ ತಕರಾರು ಅರ್ಜಿಗೆ ಸಂಬಂಧಿಸಿದಂತೆ 1975ರ ಜೂನ್ 12ರಂದು ಬೆಳಿಗ್ಗೆ ಅಲಹಾಬಾದ್ ಹೈಕೋರ್ಟ್‍ನ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹ, ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಪ್ರಧಾನ ಮಂತ್ರಿ ಅರ್ಹತೆಯನ್ನು ಇಂದಿರಾ ಗಾಂಧಿ ಕಳೆದುಕೊಂಡಿದ್ದಾರೆ ಎಂಬ ತೀರ್ಪು ನೀಡಿದರು. ಈ ಸಂಬಂಧ ಸುಪ್ರೀಂ ಕೋರ್ಟ್‍ಗೆ ಇಂದಿರಾ ಗಾಂಧಿ ಅಪೀಲು ಹೋದಾಗ ಅಲ್ಲಿಯೂ ನ್ಯಾಯಮೂರ್ತಿ ಕೃಷ್ಣ ಐಯ್ಯರ್, ಅರ್ಜಿ ಇತ್ಯರ್ಥ ಆಗುವ ವರೆಗೆ ಪ್ರಧಾನಿಯಾಗಿ ಮುಂದುವರೆಯ ಬಹುದು. ಆದರೆ ಸದನದಲ್ಲಿ ಮತದಾನದ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿದರು. ಈ ತೀರ್ಪು ಹೊರ ಬಂದ ಬಳಿಕ 1975ರ ಜೂನ್ 25ರ ಮಧ್ಯರಾತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ವಿರೋಧ ಪಕ್ಷದ ರಾಜಕೀಯ ನಾಯಕರನ್ನು ಜೈಲಿಗೆ ಕಳುಹಿಸಲಾಯಿತು. ಅದೇ ಜೂನ್ 26ರ ಬೆಳಿಗ್ಗೆ ಮಾಧ್ಯಮ ಗಳ ಮೇಲೂ ಸೆನ್ಸಾರ್‍ಶಿಪ್ ಹೇರಲಾ ಯಿತು ಎಂದು ವಿವರಿಸಿದರು.
ಏರೋಪ್ಲೇನ್ ಹತ್ತಿದ್ದು ಪೊಲೀಸ್ ಠಾಣೇಲಿ: ಮೂರು ವರ್ಷಗಳ ಹಿಂದೆ ಇಂದು ಜೆಡಿಎಸ್‍ನಲ್ಲಿರುವ ಎ.ಹೆಚ್.ವಿಶ್ವನಾಥ್ ತಾವು `ತುರ್ತು ಪರಿಸ್ಥಿತಿ’ ಸಂಬಂಧ ಬರೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿ ಸಿದ್ದರು. ಪುಸ್ತಕವನ್ನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಬಿಡುಗಡೆ ಮಾಡಿ ತುರ್ತು ಪರಿಸ್ಥಿತಿಯ ಕೆಲ ಧನಾತ್ಮಕ ಅಂಶಗಳ ಕುರಿತು ಭಾಷಣ ಮಾಡಿದರು. ಬಳಿಕ ನನ್ನನ್ನು ಭಾಷಣಕ್ಕೆ ಆಹ್ವಾನಿಸಲಾಯಿತು.
ಅಂದು ತುರ್ತು ಪರಿಸ್ಥಿತಿ ಕುರಿತು ಒಂದು ಕಥೆ ಹೇಳಿದ್ದೆ. ಅದನ್ನು ಮತ್ತೊಮ್ಮೆ ಇಲ್ಲಿ ಹೇಳುತ್ತೇನೆ ಎಂದ ಸುರೇಶ್ ಕುಮಾರ್, ನನ್ನ ಸ್ನೇಹಿತ ಒಬ್ಬ ಇದ್ದ. 19 ವರ್ಷ ವಯೋಮಾನದ ಆತನಿಗೆ ಅವನ ಸಂಘಟನೆಯವರು ಒಂದು ಕೆಲಸಕ್ಕೆ ನಿಯೋಜಿಸಿದ್ದರು. ಅದೆಂದರೆ ಅಂದು ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಉಳಿದಿದ್ದ ಕಾಮನ್ ವೆಲ್ತ್ ಪ್ರತಿನಿಧಿಗಳಿಗೆ ತುರ್ತು ಪರಿಸ್ಥಿತಿಯ ನೈಜ ಸಂಗತಿಗಳ ಕುರಿತ ಕರಪತ್ರಗಳನ್ನು ತಲುಪಿಸುವುದಾಗಿತ್ತು. ಪೊಲೀಸ್ ಬಂದೋಬಸ್ತ್ ನಡುವೆಯೂ ಅದನ್ನು ನನ್ನ ಸ್ನೇಹಿತ ಯಶಸ್ವಿಯಾಗಿ ನಿಭಾಯಿ ಸಿದ್ದ. ಆದರೆ ಕೊನೆಗೆ ಪೊಲೀಸರಿಗೆ ಸಿಕ್ಕಿ ಬೀಳಬೇಕಾಯಿತು ಎಂದರು.
ಸ್ನೇಹಿತನನ್ನು ಚೆನ್ನಾಗಿ ಥಳಿಸಿ ಜೀಪಿ ನಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದುಕೊಂಡ ಹೋದ ಪೊಲೀಸರು, 2 ಗಂಟೆಗಳ ಕಾಲ ಹೊಡೆದು ಬಳಿಕ ಏರೋಪ್ಲೇನ್ ಹತ್ತಿಸಿದರು. ನನ್ನ ಸ್ನೇಹಿತ ಅವನ ಜೀವನದಲ್ಲಿ ಮೊದಲ ಬಾರಿಗೆ ಏರೋಪ್ಲೇನ್ ಹತ್ತಿದ್ದು ಹೈಗ್ರೌಂಡ್ ಪೊಲೀಸ್ ಠಾಣೇಲಿ ಎಂದು ಕಚಗುಳಿ ಇಟ್ಟ ಸುರೇಶ್ ಕುಮಾರ್, ಮುಕ್ಕಾಲು ದಿನದ ಚಿತ್ರಹಿಂಸೆಯ ನಂತರ ಸೆಂಟ್ರಲ್ ಜೈಲಿಗೆ ಹಾಕಲಾಯಿತು. ಆ ಸ್ನೇಹಿತನ ಹೆಸರು ಎಸ್.ಸುರೇಶ್ ಕುಮಾರ್ ಎಂದು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ಮಳೆ ಸುರಿಸುವ ಮೂಲಕ ಸಾಂತ್ವನ ವ್ಯಕ್ತಪಡಿಸಿದರು.
ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕ ಸುಧಾಕರ ಹೊಸಳ್ಳಿ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಸುಧಾರಣಾ ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬಿ.ಎಸ್. ಅನುಪಮ, ಶೇಷಾದ್ರಿಪುರಂ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೆ. ಸೌಮ್ಯ ಈರಪ್ಪ, ಪಿಯು ಕಾಲೇಜು ಪ್ರಾಂಶುಪಾಲರಾದ ಎನ್.ಅರ್ಚನಾ ಸ್ವಾಮಿ ಮತ್ತಿತರರು ಹಾಜರಿದ್ದರು.
ಮೈತ್ರಿ ಸರ್ಕಾರ ಉಳಿವಿಗೆ ಮಧ್ಯಂತರ ಚುನಾವಣೆ ಮಂತ್ರ
ಮೈಸೂರು,ಜೂ.25(ಪಿಎಂ)-ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಧ್ಯಂತರ ಚುನಾವಣೆ ಎಂಬ ಬಾಂಬ್ ಸಿಡಿಸಲಾಗಿದೆ ಅಷ್ಟೆ. ಮಧ್ಯಂತರ ಚುನಾವಣೆ ಆಗೋದಿಲ್ಲ, ಅದು ಯಾರಿಗೂ ಬೇಕೂ ಆಗಿಲ್ಲ ಎಂದು ಮಾಜಿ ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯ ಶೇಷಾದ್ರಿಪುರಂ ಕಾಲೇಜು ಆವರಣದಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮಧ್ಯಂತರ ಚುನಾ ವಣೆ ಎನ್ನುವುದು ಬಹಳ ಬುದ್ಧಿವಂತ ಹೇಳಿಕೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಧ್ಯಂತರ ಚುನಾವಣೆಯನ್ನು ನಾವು ಬಯಸಿಲ್ಲ. ಆ ಪ್ರಮೇಯವೂ ಉದ್ಭವಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ಯಾವುದೇ ಪಕ್ಷದ ಶಾಸಕರು ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧರಿಲ್ಲ. ನನ್ನ ಪ್ರಕಾರ ಮಧ್ಯಂತರ ಚುನಾವಣೆ ಆಗುವುದಿಲ್ಲ. ಅದರಿಂದ ಬಿಜೆಪಿಗೆ ಲಾಭ ಆಗಬಹುದು. ಆದರೆ ಅದರಿಂದ ರಾಜ್ಯಕ್ಕೆ ಹೊರೆ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈತ್ರಿ ಸರ್ಕಾರದಿಂದ ಆಡಳಿತ ನಡೆಸಲು ಸಾಧ್ಯವಿಲ್ಲವಾದರೆ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧವಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಪರಿಸ್ಥಿತಿ ಹೇಗೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಮರ್ಥವಾಗಿದೆ ಎಂದರು. ಗ್ರಾಮ ವಾಸ್ತವ್ಯ ನಿಜಕ್ಕೂ ಒಳ್ಳೆಯದು. ಆದರೆ ಇವರು ಆಂತರಿಕ ಗೊಂದಲದ ಗಮನವನ್ನು ಬೇರೆಡೆ ಸೆಳೆಯಲು ಗ್ರಾಮವಾಸ್ತವ್ಯ ತಂತ್ರ ಅನುಸ ರಿಸುತ್ತಿದ್ದಾರೆ. ಇವರು ಈ ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗಲೂ ಗ್ರಾಮ ವಾಸ್ತವ್ಯ ನಡೆಸಿದ್ದರು. ಈಗ ಅದೇ ಗ್ರಾಮಗಳಲ್ಲೇ ಮತ್ತೆ ಗ್ರಾಮ ವಾಸ್ತವ್ಯ ಮಾಡಿ ಇವರು ಆಗ ಕೊಟ್ಟಿದ್ದ ಭರವಸೆಗಳು ಈಡೇರಿಸಿರುವುದನ್ನು ತಿಳಿಸಿದರೆ ಅದು ನಿಜಕ್ಕೂ ಗ್ರಾಮ ವಾಸ್ತವ್ಯ ಎನ್ನಬಹುದು ಎಂದ ಅವರು, ರೈತರ ಸಾಲ ಮನ್ನಾ ಸಂಬಂಧದ ಗೊಂದಲ, ಹೊಸ ಸಾಲ ನೀಡದೇ ಇರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇವರನ್ನು ನಂಬಿದರೆ ಪ್ರಯೋಜನವಿಲ್ಲ ಎಂಬುದು ರೈತ ಸಮುದಾಯಕ್ಕೂ ಅರ್ಥವಾಗಿದೆ ಎಂದು ಹೇಳಿದರು.