ಸರ್ಕಾರದ ಎಲ್ಲಾ ಅಂಗಗಳಿಗಿಂತ ಸಂವಿಧಾನವೇ ಶ್ರೇಷ್ಠ

ಮೈಸೂರು: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕ್ಕಿಂತಲೂ ಅತ್ಯುನ್ನತವಾದುದು ದೇಶದ ಸಂವಿಧಾನ ಎಂದು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ತಿಳಿಸಿದರು.

ಮೈಸೂರಿನ ಶಾರದಾ ವಿಲಾಸ ವಿದ್ಯಾ ಸಂಸ್ಥೆಗಳು, ಶಾರದಾ ವಿಲಾಸ ಕಾನೂನು ಕಾಲೇಜು ವತಿಯಿಂದ ಸಂಸ್ಥೆಯ ಶತ ಮಾನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಈ ಮೂರು ಅಂಗಗಳು ಸಂವಿಧಾನ ಆಶೋತ್ತರದ ಹಿನ್ನೆಲೆಯಲ್ಲಿ ಪ್ರಾಪ್ತವಾಗಿ ರುವ ಇತಿಮಿತಿಯಡಿ ದೇಶದ ಪ್ರತಿ ಪ್ರಜೆಯ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು. ಶಾಸ ಕಾಂಗ ಮತ್ತು ಕಾರ್ಯಾಂಗದ ಪೈಕಿ ನ್ಯಾಯಾಂಗಕ್ಕೆ ಸ್ವಾಯತ್ತತೆಯಿಂದ ಕಾರ್ಯ ನಿರ್ವಹಿಸುವ ವಿಶೇಷ ಸ್ಥಾನಮಾನ ನೀಡ ಲಾಗಿದೆ. ಈ ಮೂರು ಅಂಗಗಳಿಗೂ ಮಿಗಿ ಲಾಗಿ ದೇಶದ ಸಂವಿಧಾನವೇ ಅತ್ಯುತ್ತಮ ಮತ್ತು ಅಂತಿಮ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ 1947ರ ಆಗಸ್ಟ್ 29ರಂದು ಸಂವಿಧಾನ ಕರಡು ರಚಿಸಲು ಸಮಿತಿ ರಚನೆ ಮಾಡಲಾಯಿತು. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಹಲ ವಾರು ಮಹನೀಯರು ಸಂವಿಧಾನ ರಚನೆ ಗಾಗಿ ಶ್ರಮಿಸಿದರು. 1949ರ ನವೆಂಬರ್ 26 ರಂದು ಸಂವಿಧಾನ ಅಂಗೀಕಾರಗೊಂಡ ದಿನವಾದರೆ, 1950ರ ಜನವರಿ 26 ಸಂವಿಧಾನ ಜಾರಿಗೊಳಿಸಿದ ದಿನವಾಗಿದೆ. ನಮ್ಮ ಸಂವಿ ಧಾನದಲ್ಲಿ ಬಹಳ ಮುಖ್ಯವಾಗಿ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. 42ನೇ ಸಂವಿಧಾನ ತಿದ್ದುಪಡಿಯಾಗಿ ಪ್ರಜೆ ಗಳಿಗೆ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು ಎಂದು ವಿವರಿಸಿದರು.

ಯುವ ಸಮುದಾಯಕ್ಕೆ ಬೇಕು ಆತ್ಮ ವಿಶ್ವಾಸ: ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಿ ಸನ್ಮಾರ್ಗ ತೋರಬೇ ಕಿದೆ. ಯುವ ಜನಾಂಗದ ಮೇಲೆ ದುಷ್ಪರಿ ಣಾಮ ಉಂಟು ಮಾಡುವಂತಹ ಅಂಶಗಳು ಇಂದು ಹೆಚ್ಚಾಗುತ್ತಿದೆ. ಹಣದ ವ್ಯಾಮೋಹ ಹೆಚ್ಚಾಗುತ್ತಿದ್ದು, ಹಣವೊಂದೇ ಬದುಕಲ್ಲ ಎಂಬುದನ್ನು ಯುವ ಜನರಿಗೆ ಮನದಟ್ಟು ಮಾಡಿಕೊಡಬೇಕಿದೆ. ಸಮಾಜಕ್ಕೆ ಕೊಡುಗೆ ಕೊಟ್ಟರೆ ಜನತೆ ನೆನಪಿಸಿಕೊಳ್ಳುತ್ತಾರೆ. ಸ್ವಾಮಿ ವಿವೇಕಾನಂದರ ಜೀವಿತಾವಧಿ ಕೇವಲ 39 ವರ್ಷಗಳು. ಆದರೆ ಅವರ ಉದಾತ್ತ ಚಿಂತನೆ ಗಳು ಶಾಶ್ವತವಾಗಿವೆ ಎಂದು ಹೇಳಿದರು.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್‍ನಲ್ಲಿ ಹಿಡಿತವಿಲ್ಲವೆಂಬ ಅಳುಕು ಇರುತ್ತದೆ. ಈ ಮಕ್ಕಳಿಗೆ ಪ್ರಾಥ ಮಿಕ ಶಿಕ್ಷಣದಲ್ಲಿ ಆಂಗ್ಲ ಭಾಷೆಯ ಶಿಕ್ಷಣ ಸಮ ರ್ಪಕವಾಗಿ ಸಿಗುವುದೇ ತೀರಾ ಕಡಿಮೆ. ನಮ್ಮ ಕಾಲದಲ್ಲಂತೂ ಈ ಪರಿಸ್ಥಿತಿ ಅಧಿಕ ವಾಗಿತ್ತು. ನಾನು ಸಹ ಗ್ರಾಮೀಣ ಪ್ರದೇಶ ದಿಂದ ಬಂದವನು. ನನ್ನಲ್ಲೂ ಈ ಅಳುಕು ಇತ್ತು. 6ನೇ ತರಗತಿಯವರೆಗೂ ಹಾಸನ ಜಿಲ್ಲೆಯ ನಮ್ಮ ಹಳ್ಳಿಯಲ್ಲೇ ವಿದ್ಯಾಭ್ಯಾಸ ಮಾಡಿದ ನಾನು, ಬಳಿಕ 7ನೇ ತರಗತಿ ಯಿಂದ ದ್ವಿತೀಯ ಪಿಯುಸಿವರೆಗೆ ಸಕಲೇಶ ಪುರದಲ್ಲಿ ವ್ಯಾಸಂಗ ಮುಂದುವರೆಸಿದೆ. ಈ ಅವಧಿಯಲ್ಲಿ ನಮಗೆ ಇಂಗ್ಲಿಷ್ ಶಿಕ್ಷಕರೇ ಇರಲಿಲ್ಲ. ಹೀಗಾಗಿ ಎಲ್ಲಾ ವಿಷಯ ಗಳಲ್ಲೂ ಪ್ರಥಮ ದರ್ಜೆ ಪಡೆಯುತ್ತಿದ್ದು, ಇಂಗ್ಲಿಷ್ ನಲ್ಲಿ ಮಾತ್ರ ಕೇವಲ ಪಾಸ್ ಆಗಿರುತ್ತಿದ್ದೆ ಎಂದು ತಮ್ಮ ಬಾಲ್ಯದ ನೆನಪು ಹಂಚಿಕೊಂಡರು.

ಶಿಕ್ಷಕರು ಮಕ್ಕಳ ಕೊರತೆ ಗುರುತಿಸಿ: ಶಿಕ್ಷಕರು, ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂದು ಗುರುತಿಸಬೇಕು. ಆ ಮೂಲಕ ಅವರಲ್ಲಿ ಸುಧಾರಣೆ ತರಲು ಪ್ರಯತ್ನಿಸಬೇಕು. ಇಂತಹ ಮಹತ್ವದ ಜವಾ ಬ್ದಾರಿಯಲ್ಲಿ ಶಿಕ್ಷಕರು ತಮ್ಮ ಬದ್ಧತೆ ಪ್ರದರ್ಶಿ ಸಬೇಕು. ನಾನು ಪಿಯುಸಿ ಬಳಿಕ ಐದು ವರ್ಷಗಳ ಎಲ್‍ಎಲ್‍ಬಿಗೆ ಪ್ರವೇಶ ಪಡೆದು ಕೊಂಡೆ. ಇಲ್ಲಿಯವರೆಗೆ ಇಂಗ್ಲಿಷ್ ಶಿಕ್ಷಕರಿ ಲ್ಲದೆ, ಸಮಸ್ಯೆ ಅನುಭವಿಸುತ್ತಿದ್ದ ನನ್ನಂತಹ ವರಿಗೆ ಇಲ್ಲಿ ಶಿಕ್ಷಕರು ಇದ್ದಾಗ್ಯೂ ತರಗತಿಗೆ ಹೋಗಲು ಮನಸು ಮಾತ್ರ ಬರುತ್ತಿರಲ್ಲಿಲ್ಲ. ಕಾರಣ ಇಂಗ್ಲಿಷ್ ಎಂದರೆ ಮೊದಲೇ ಕಬ್ಬಿ ಣದ ಕಡಲೆ ಎಂದು ಭಾವಿಸಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಲ್ಲಿನ ಇಂಗ್ಲಿಷ್ ಶಿಕ್ಷಕರು ಅಪಮಾನಿಸುತ್ತಿದ್ದ ರೀತಿಯಿಂ ದಾಗಿ ನಾನೂ ಸೇರಿದಂತೆ ಗ್ರಾಮೀಣ ಪ್ರದೇ ಶದ ವಿದ್ಯಾರ್ಥಿಗಳು ಇವರ ತರಗತಿಗೆ ಹೋಗುವುದನ್ನೇ ಬಿಟ್ಟಿದ್ದೆವು. ಈ ಹಿನ್ನೆಲೆ ಯಲ್ಲಿ ಶಿಕ್ಷಕರಾದವರು ವಿದ್ಯಾರ್ಥಿಗಳ ಕೊರತೆ ಗುರುತಿಸಿ ಸುಧಾರಣೆ ಆಗಲು ಸಹಾಯ ಮಾಡಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂವಿಧಾನ ಪ್ರತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ವಿವಿಧ ಹಂತದ ನ್ಯಾಯಾ ಲಯಗಳಲ್ಲಿ ನ್ಯಾಯಾಧೀಶರಾಗಿ ನೇಮಕ ಗೊಂಡಿರುವ ಶಾರದಾ ವಿಲಾಸ ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಡಿ. ರೋಹಿಣಿ, ಕೆ.ಗೋಪಾಲಕೃಷ್ಣ, ಪ್ರತಾಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್ ಲಕ್ಷ್ಮಣ್ ಕೃಷ್ಣಪ್ಪ ಒಂಟಿಗೋಡಿ (ಎಸ್.ಕೆ.ಒಂಟಿಗೋಡಿ), ಮಂಡ್ಯ ಪ್ರಧಾನ ಸತ್ರ ನ್ಯಾಯಾಲಯದ ಅಭಿಯೋ ಜಕ ಹೆಚ್.ಇ.ಚಿಣ್ಣಪ್ಪ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್‍ಕುಮಾರ್, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಮತ್ತಿತರರು ಹಾಜರಿದ್ದರು.