ಅಂತಿಮವಾಗಿ ಚರ್ಚ್ ನಿರ್ಮಾಣಕ್ಕೆ ಸಮ್ಮತಿ
ಮೈಸೂರು: ಮೈಸೂರಿನ ಹೆಬ್ಬಾಳು ಬಡಾವಣೆಯ ನಾಗರಿಕ ಸೌಲಭ್ಯ(ಸಿಎ) ನಿವೇಶನದಲ್ಲಿ ಚರ್ಚ್ ನಿರ್ಮಾಣಕ್ಕೆ ಅನುಮತಿ ನೀಡುವ ಸಂಬಂಧ ನಗರಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಗದ್ದಲ ಉಂಟಾಗಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಮೈಸೂರು ನಗರಪಾಲಿಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಗುರು ವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಚರ್ಚ್ ವಿಚಾರ ಕೋಲಾಹಲಕ್ಕೆ ಕಾರಣ ವಾಯಿತು. ಹೆಬ್ಬಾಳು, 2ನೇ ಹಂತದಲ್ಲಿ ರುವ ಸಿಎ-2ಸಿ ನಿವೇಶನದಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸಲು ಮಾರ್ಥೋಮ ಸಿರಿ ಯನ್ ಚರ್ಚ್‍ನ ಅಧ್ಯಕ್ಷರಿಗೆ ಮಂಜೂರು ಮಾಡಿದ್ದು, ಇದನ್ನು ಪಾಲಿಕೆಯ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಒಪ್ಪಿ, ಕೌನ್ಸಿಲ್ ಮಂಜೂರಾತಿಗೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಕಾರ್ಯಸೂಚಿ ಯನ್ನು ಪ್ರಸ್ತಾಪಿಸಲಾಯಿತು.
ಈ ವೇಳೆ ಮಾತನಾಡಿದ ವಿರೋಧ ಪಕ್ಷ(ಬಿಜೆಪಿ)ದ ನಾಯಕ ಬಿ.ವಿ. ಮಂಜುನಾಥ್, ಚರ್ಚ್ ನಿರ್ಮಾಣದ ಸಂಬಂಧ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದ ಸಂದರ್ಭದಲ್ಲಿ ವ್ಯಕ್ತವಾಗಿದ್ದ ಆಕ್ಷೇಪಣೆಗಳನ್ನು ಪ್ರಸ್ತಾಪಿಸಿ, ಸ್ಥಳ ಪರಿಶೀಲನೆ ನಡೆಸಿದ ನಂತರ ಈ ವಿಚಾರ ವಾಗಿ ನಿರ್ಣಯ ಕೈಗೊಳ್ಳಬೇಕು. ಹಾಗಾಗಿ ವಿಷಯವನ್ನು ಮುಂದೂಡಬೇಕೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಅಯೂಬ್‍ಖಾನ್, ಚರ್ಚ್ ನಿಂದ ನಿವಾಸಿಗಳಿಗೆ ತೊಂದರೆಯಾಗು ತ್ತದೆ, ಈ ಪ್ರದೇಶದಲ್ಲಿ ಕ್ರೈಸ್ತ ಸಮುದಾ ಯದ ಜನಸಂಖ್ಯೆ ತುಂಬಾ ಕಡಿಮೆಯಿದೆ, ಪಕ್ಕದಲ್ಲಿ ಕಾನ್ವೆಂಟ್ ಇದೆ, ರಸ್ತೆ ಕಿರಿದಾಗಿ ರುವುದರಿಂದ ಚರ್ಚ್ ನಿರ್ಮಾಣವಾದರೆ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ. ಆದರೆ ಯಾವ ಚರ್ಚ್ ನಿಂದಲೂ ತೊಂದರೆಯಾಗಿಲ್ಲ. ಒಂದೇ ಮನೆ ಯಿದ್ದರೂ ಪ್ರಾರ್ಥನಾ ಮಂದಿರ ನಿರ್ಮಿಸಿ ಕೊಳ್ಳಲು ಅವಕಾಶ ನೀಡಬೇಕು. ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದರು.
ಇವರಿಗೆ ಪೂರಕವಾಗಿ ಮಾತನಾಡಿದ ಮಾಜಿ ಮೇಯರ್ ಆರಿಫ್ ಹುಸೇನ್, ಚರ್ಚ್ ವಿಚಾರ ಬಂದಾಕ್ಷಣ ಬಿಜೆಪಿಯ ವರು ಏಕೆ ವಿರೋಧ ಮಾಡುತ್ತಿದ್ದೀರಿ? ಎಂದು ಹೇಳಿದ್ದು, ಸಭೆಯಲ್ಲಿ ಕೋಲಾ ಹಲ ಸೃಷ್ಟಿಗೆ ಕಾರಣವಾಯಿತು. ಬಿಜೆಪಿ ಸದಸ್ಯರೆಲ್ಲಾ ಎದ್ದುನಿಂತು ಆಕ್ರೋಶ ವ್ಯಕ್ತಪ ಡಿಸಿದರು. ಬಿಜೆಪಿ ಸದಸ್ಯರಾದ ಎಂ.ಯು. ಸುಬ್ಬಯ್ಯ, ಇಲ್ಲಿ ನಗರದ ಅಭಿವೃದ್ಧಿ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಬೇಕೇ ಹೊರತು ಪಕ್ಷವನ್ನು ಎಳೆದು ತರಬಾರದು ಎಂದು ಆಕ್ಷೇಪಿಸಿದರು. ಬಿಜೆಪಿಯ ಎಲ್ಲಾ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿ ಸಿದರು. ಚರ್ಚ್ ನಿರ್ಮಾಣಕ್ಕೆ ನಾವೆಂದೂ ವಿರೋಧಿಸಿಲ್ಲ. ಆದರೆ ಸಾರ್ವಜನಿಕರಿಂದ ಆಕ್ಷೇಪಣೆ ಇರುವುದರಿಂದ ಸ್ಥಳ ಪರಿಶೀ ಲನೆ ನಡೆಸಿ, ನಂತರ ತೀರ್ಮಾನ ಕೈಗೊ ಳ್ಳುವ ನಿಟ್ಟಿನಲ್ಲಿ ಚರ್ಚೆ ಮುಂದೂಡು ವಂತೆ ಹೇಳಿದ್ದೇವೆ. ಈ ಕಾರಣಕ್ಕೆ ಬಿಜೆಪಿ ಕ್ರೈಸ್ತರ ವಿರೋಧಿ ಎಂದು ದೂರುವುದು ಖಂಡನಾರ್ಹ. ಆರಿಫ್ ಹುಸೇನ್ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದರು. ಆರಿಫ್ ಹುಸೇನ್ ಹೇಳಿರುವುದು ಸರಿ ಯಾಗಿದೆ, ಕ್ಷಮೆ ಕೇಳುವ ಅಗತ್ಯವಿಲ್ಲ ಎಂದ ಅಯೂಬ್‍ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಸದಸ್ಯರು ಹಾಗೂ ಅಯೂಬ್‍ಖಾನ್ ನಡುವೆ ಮಾತಿನ ಚಕಮಕಿಯೂ ನಡೆ ಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲ ಸದಸ್ಯರು ಮನವೊಲಿಸಲು ಮುಂದಾ ದರೂ ಪ್ರಯೋಜನವಾಗಲಿಲ್ಲ. ಆರಿಫ್ ಹುಸೇನ್ ಅವರು ಹೇಳಿರುವ ಆಕ್ಷೇಪಿತ ಪದವನ್ನು ಕಡತದಿಂದ ತೆಗೆಸುವುದಾಗಿ ಹೇಳಿದ ಮೇಯರ್ ಮಾತಿಗೂ ಬಗ್ಗಲಿಲ್ಲ. ಗದ್ದಲ ಮತ್ತಷ್ಟು ಹೆಚ್ಚಾಗಿದ್ದರಿಂದ ಸಭೆಯನ್ನು 10 ನಿಮಿಷ ಮುಂದೂಡಿದರು.
ಮತ್ತೆ ಸಭೆ ಆರಂಭವಾದಾಗ ಬಿ.ವಿ. ಮಂಜುನಾಥ್ ಮಾತನಾಡಿ, ಕ್ರೈಸ್ತ ಸಮು ದಾಯವನ್ನೂ ಬಿಜೆಪಿ ಸಮಾನವಾಗಿ ಕಾಣುತ್ತಿದೆ. ಎಸ್.ಎ.ರಾಮದಾಸ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಟ್ಯಾಂತರ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಾವು ಚರ್ಚ್ ನಿರ್ಮಾಣ ವನ್ನು ವಿರೋಧಿಸಿಲ್ಲ. ಆದರೆ ಆಕ್ಷೇಪಣೆ ಗಳಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಮುಂದುವರೆಯಬೇಕೆಂದು ಹೇಳಿ ದ್ದೇವೆ. ಇಷ್ಟಕ್ಕೆ ಕ್ರೈಸ್ತ ವಿರೋಧಿ ಹಣೆಪಟ್ಟಿ ಕಟ್ಟಿದ್ದರಿಂದ ಸದನದ ಬಾವಿಗಿಳಿದು ಪ್ರತಿಭಟಿಸಬೇಕಾಯಿತು. ನೀರಿನ ದರ ಪರಿಷ್ಕರಣೆ ಸಂಬಂಧಿತ ಕಾರ್ಯಸೂ ಚಿಯ ಬಗ್ಗೆ ಚರ್ಚೆಗೆ ಅವಕಾಶ ನೀಡದೆ, ನೀವೇ ಮುಂದೂಡಿಸಿದ್ದೀರಿ. ದರ ಪರಿಷ್ಕ ರಣೆಯಿಂದ ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂದು ಹೀಗೆ ಮಾಡಿದ್ದೀರೆಂದು ನಾವೂ ವಿರೋ ಧಿಸಬಹುದಿತ್ತು. ಆದರೆ ನಾವು ಪಕ್ಷವನ್ನು ಎಳೆದು ತರದೆ, ನಿಮ್ಮ ಅಭಿಪ್ರಾಯವನ್ನು ಒಪ್ಪಿದೆವು. ಬಿಜೆಪಿ ಬಗ್ಗೆ ತಪ್ಪಾಗಿ ಮಾತ ನಾಡಿದ ಆರಿಫ್ ಹುಸೇನ್ ಅವರು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರಿಫ್ ಹುಸೇನ್, ಚರ್ಚ್ ಬಗ್ಗೆ ಮಾತನಾಡು ವಾಗ ಬಿಜಪಿಯವರು ಏಕೆ ವಿರೋಧ ಮಾಡುತ್ತೀರಿ ಎಂದು ನಾನು ಹೇಳಿದ್ದು ನಿಜ. ಇದರಿಂದ ಬಿಜೆಪಿಯವರಿಗೆ ನೋವಾಗಿ ದ್ದರೆ, ನಿಮ್ಮೆಲ್ಲರ ಮನಸ್ಸಿನಲ್ಲಿ ಚರ್ಚ್ ನಿರ್ಮಾಣಕ್ಕೆ ಸಮ್ಮತಿ ಇದ್ದರೆ ನಾನು ಆಡಿದ ಮಾತನ್ನು ವಾಪಸ್ಸು ಪಡೆಯುತ್ತೇನೆ ಎಂದರು.
ಬಿಜೆಪಿ ಸದಸ್ಯ ಶಿವಕುಮಾರ್, ಚರ್ಚ್ ನಿರ್ಮಾಣಕ್ಕೆ ಬಿಜೆಪಿಯ ಸಹಮತವಿದೆ. ಆದರೆ ಯಾವುದೇ ವಿಚಾರವನ್ನು ಕೌನ್ಸಿಲ್ ನಲ್ಲಿ ಕಾನೂನಾತ್ಮಕವಾಗಿ ಚರ್ಚೆ ಮಾಡ ಬೇಕು. ಇದನ್ನು ಪ್ರತಿಪಾಧಿಸಿದ್ದಕ್ಕೆ ಪಕ್ಷ, ಧರ್ಮವನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದರು. ಕೊನೆಗೆ ಮೇಯರ್ ಪುಷ್ಪ ಲತಾ ಜಗನ್ನಾಥ್ ಅವರು, ಸದರಿ ಸಿಎ ನಿವೇಶನದಲ್ಲಿ ಚರ್ಚ್ ನಿರ್ಮಾಣಕ್ಕೆ ಕೌನ್ಸಿಲ್ ಒಪ್ಪಿದೆ ಎಂದು ಸ್ಪಷ್ಟಪಡಿಸಿದರು.