ಮೈಸೂರು, ಜು.1(ಎಂಟಿವೈ)- ರಾಜ್ಯದ ಸಮ್ಮಿಶ್ರ ಸರ್ಕಾರ ಮೇಲೆ ಯಾರಿಗೂ ನಂಬಿಕೆಯಿಲ್ಲದಂತಾಗಿದೆ. ಬಿಜೆಪಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸರ್ಕಾರದ ಪತನ ಆರಂಭವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವೇನೂ ಆಪರೇಷನ್ ಕಮಲ ಮಾಡುತ್ತಿಲ್ಲ, ಮಾಡೋದು ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಸ್ಫೋಟವಾಗಲಿದೆ. ದೋಸ್ತಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ ಸಾಕಷ್ಟು ಗೊಂದಲವಿದೆ. ಕೆಲವರು ಮುಂದೇನೂ ಮಾಡಬೇಕೆಂಬ ಯೋಚನೆಯಲ್ಲಿ ಸಿಲುಕಿದ್ದಾರೆ. ಶಾಸಕ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಈ ಗೊಂದಲ ಜಗಜ್ಜಾಹೀರಾಗಿದೆ. ಈ ಶಾಸಕರೊಂದಿಗೆ ಎಷ್ಟು ಅತೃಪ್ತ ಶಾಸಕರಿದ್ದಾರೆ ಎಂದು ತಿಳಿಯಲು ಇನ್ನೂ ಎರಡು ದಿನ ಕಾದು ನೋಡಬೇಕು ಎಂದರು. ಜಿಂದಾಲ್‍ಗೆ ಭೂಮಿ ಕೊಡಬಾರದೆಂದು ಒತ್ತಾಯಿಸಿದ್ದ ಆನಂದ್‍ಸಿಂಗ್ ಅದಕ್ಕಾಗಿ ರಾಜೀನಾಮೆ ಕೊಡಲು ಸಿದ್ಧವೆಂದು ಹೇಳಿದ್ದರು. ಜಿಂದಾಲ್‍ಗೆ ಭೂಮಿ ಕೊಡಲ್ಲವೆಂದು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ ಕಣ್ಣೊರೆಸುವ ತಂತ್ರ ಕೆಲಸ ಮಾಡಿದ್ದರು.
ಆದರೆ, ಈ ವಿಚಾರದಲ್ಲಿ ಆನಂದ್‍ಸಿಂಗ್ ರಾಜೀನಾಮೆ ನೀಡಿರುವುದು ಶ್ಲಾಘನೀಯ. ನಾನು ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದರು. ಈಗ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಿದೆ. ಮುಂದೆ ಇನ್ನು ಅದನ್ನೇ ಪಾಲೋ ಅಪ್ ಮಾಡುವ ಲಕ್ಷಣ ಕಾಣಿಸಿ ಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ರಾಜೀನಾಮೆ ಕೊಡುವ ಬದಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದ ದಾಹ, ದುರಾಸೆಯಿಂದ ಮುಂದುವರಿದಿದ್ದಾರೆ. ಈ ಪಕ್ಷ ಸೋತು ದೂಳಿಪಟವಾಗಿ ದ್ದರೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಲಾಟರಿ ಹೊಡೆದಂತೆ ಮುಖ್ಯಮಂತ್ರಿಯಾಗಿ ರುವ ಕುಮಾರಸ್ವಾಮಿ, ದಿಡೀರನೇ ಸಿಎಂ ಪದವಿಯಿಂದ ಕೆಳಗಿಳಿಯಲಿದ್ದಾರೆ ಎಂದರು.
ಜನರು ಹಾಗೂ ಯಾವ ಶಾಸಕರಿಗೂ ಗೊಂದಲದ ಗೂಡಾಗಿರುವ ಸರ್ಕಾರ ಬೇಡವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಂದಲೇ ಸÀರ್ಕಾರ ಪತನವಾಗುತ್ತದೆ. ಸಮ್ಮಿಶ್ರ ಸÀರ್ಕಾರ ಉಳಿಸುವ ಕುರಿತು ಮಧ್ಯಸ್ಥಿಕೆ ವಹಿಸಲುಮುಂದಾಗಿರುವ ಡಿ.ಕೆ.ಶಿವಕುಮಾರ್ ಯಾವಾಗಲೂ ಹೇಳಿದ್ದೆ ಹೇಳುತ್ತಾರೆ. ಅವರ ಕ್ಯಾಸೆಟ್ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ಈ ಸರ್ಕಾರ ಪತನವಾಗುವುದು ಖಚಿತ. ಈ ನಾಯಕರ ದೊಂಬರಾಟ ಜಾಸ್ತಿ ದಿನ ನಡೆಯಲ್ಲ ಎಂದರು.
ಜಿಂದಾಲ್‍ನಿಂದ ಕಿಕ್‍ಬ್ಯಾಕ್: ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಕಿಕ್‍ಬ್ಯಾಕ್ ಪಡೆಯಲಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಉಪ ಸಮಿತಿ ರಚಿಸಲಾಗಿದೆ ಹೊರತು ಬೇರೇನೂ ಇಲ್ಲ. ಈಗಾಗಲೇ 14 ಸಾವಿರ ಎಕರೆ ಭೂಮಿ ಕೊಡಲಾಗಿದೆ. ಉಳಿದ 3 ಸಾವಿರ ಎಕರೆಯನ್ನು ಕೊಡುವುದಕ್ಕೆ ಕಿಕ್‍ಬ್ಯಾಕ್ ಪಡೆಯಲಾಗಿದೆ ಎನ್ನುವು ದರಲ್ಲಿ ಯಾವ ಅನುಮಾನವೇ ಇಲ್ಲ. ಇಲ್ಲದಿದ್ದರೆ ಇಷ್ಟೊಂದು ವಿರೋಧದ ನಡುವೆ ಜಿಂದಾಲ್‍ಗೆ ಭೂಮಿ ಕೊಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರಾಧ್ಯಕ್ಷ ಡಾ.ಬಿ.ಎಚ್. ಮಂಜುನಾಥ್, ಪಾಲಿಕೆ ಸದಸ್ಯ ಎಂ.ಸತೀಶ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಹೆಚ್.ಗಿರಿಧರ್, ಜಯಪ್ರಕಾಶ್, ಆನಂದ್, ಲೋಹಿತ್ ಇನ್ನಿತರರು ಇದ್ದರು.