ಡಿ.7ಕ್ಕೆ ಮೈಸೂರಿನ ಪ್ರಪ್ರಥಮ ಫ್ಲೈಓವರ್ ಉದ್ಘಾಟನೆ

ಮೈಸೂರು: ಮೈಸೂರಿನ ಹಿನಕಲ್ ಬಳಿ ರಿಂಗ್ ರಸ್ತೆಗೆ ಅಡ್ಡಲಾಗಿ ಹುಣಸೂರು ರಸ್ತೆಗೆ ನಿರ್ಮಿಸಿರುವ ನಗರದ ಮೊಟ್ಟ ಮೊದಲ ಫ್ಲೈಓವರ್ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದು ಮುಂದೆ ಅಟಲ್ ಬಿಹಾರಿ ವಾಜ ಪೇಯಿ ಫ್ಲೈಓವರ್ ವೃತ್ತವಾಗಿ ಮುಂದಿನ ದಿನಗಳಲ್ಲಿ ಕರೆಸಿಕೊಳ್ಳಲಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಫ್ಲೈಓವರ್ (ಮೇಲ್ಸೆತುವೆ ಮಾರ್ಗ) 21.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿದೆ. ಸೋಮವಾರ ಮುಡಾ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಡಿ.7 ರಂದು ಫ್ಲೈಓವರ್ ಉದ್ಘಾಟನೆಯನ್ನು ಕೇಂದ್ರದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಹರ್ದೀಪ್‍ಸಿಂಗ್ ಪುರಿ ಅವರಿಂದ ನೆರವೇರಿ ಸಲು ಉದ್ದೇಶಿಸಲಾಗಿದೆ ಎಂದರು.

ಮೈಸೂರಿನಲ್ಲಿ ಡಿ.7ರಂದು ನಡೆಯುವ ಕ್ರೆಡಯ್ ರಾಷ್ಟ್ರೀಯ ಸಮ್ಮೇಳನಕ್ಕೆ ಕೇಂದ್ರ ಸಚಿವ ಹರ್ದೀಪ್‍ಸಿಂಗ್ ಪುರಿ ಅವರಿಗೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಅವರಿಂದಲೇ ಫ್ಲೈಓವರ್ ಉದ್ಘಾಟನೆ ನೆರವೇರಿಸಲು ಉದ್ದೇ ಶಿಸಲಾಗಿದೆ. ಆರಂಭದಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ ಆರಂಭಿಸಲಾಯಿತು. ಆ ಬಳಿಕ ಫ್ಲೈಓವರ್ ನಿರ್ಮಿಸಲು ನಿರ್ಣಯಿಸಲಾ ಯಿತು. ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯ ಸರ್ಕಾರದಿಂದ ಶೇ.30 ಮತ್ತು ಶೇ.10ರಷ್ಟು ಅನುದಾನವನ್ನು ಮುಡಾ ಭರಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ವಾಜಪೇಯಿ ಫ್ಲೈಓವರ್ ವೃತ್ತ: ಈ ಹಿಂದೆಯೇ ಹಿನಕಲ್ ವೃತ್ತವನ್ನು ಅಟಲ್ ಬಿಹಾರಿ ವಾಜಪೇಯಿ ವೃತ್ತ ಎಂದು ಮಹಾ ನಗರ ಪಾಲಿಕೆ ನಾಮಕರಣ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಇದ್ದ ನಾಮಫಲಕ ತೆಗೆಯಲಾಗಿದ್ದು,
ಪುನರ್ ನಾಮಕರಣ ಮಾಡಿ ಫಲಕ ಅಳವಡಿಸಲಾಗುವುದು ಎಂದರು. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ನಗರಗಳ ಅಭಿವೃದ್ಧಿಗಾಗಿ ನರ್ಮ್ ಯೋಜನೆ ಜಾರಿಗೊಳಿಸಲಾಯಿತು. ಆದರೆ ಈ ಯೋಜನೆ 2008ರಲ್ಲಿ ಆರಂಭಗೊಂಡು 2014ಕ್ಕೆ ಪೂರ್ಣಗೊಂಡಿತು. ನಗರಾಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮತ್ತೆ ಈ ಯೋಜನೆ ಮುಂದುವರೆಸಿತು. ಯುಪಿಎ ಅವಧಿಯಲ್ಲಿ ಮೈಸೂರಿನಲ್ಲಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಂಡಿರಲಿಲ್ಲ. ನಾನು ಸಂಸದನಾದ ಬಳಿಕ ಮೈಸೂರಿನಲ್ಲಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಿ ಕಾರ್ಯಗತಗೊಳಿಸಲಾಯಿತು ಎಂದು ಹೇಳಿದರು.

ಅನಂತಕುಮಾರ್ ವೃತ್ತ: ಕೆಆರ್‍ಎಸ್ ರಸ್ತೆಯಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ನೆರವಾದರು. ಈಗಾಗಲೇ ಕೇಂದ್ರದಿಂದ 25 ಸಾವಿರ ಪಾಸ್‍ಪೋರ್ಟ್‍ಗಳನ್ನು ವಿತರಣೆ ಮಾಡಲಾಗಿದೆ. ಈ ಕೇಂದ್ರ ಆರಂಭಿಸಲು ನೆರವಾದ ಅನಂತಕುಮಾರ್ ಅವರನ್ನು ಸ್ಮರಿಸುವ ಸದುದ್ದೇಶದಿಂದ ಕೆಆರ್‍ಎಸ್ ರಸ್ತೆಯ ರಾಯಲ್ ಇನ್ ಹೋಟೆಲ್ ಬಳಿಯ ವೃತ್ತಕ್ಕೆ ಅನಂತಕುಮಾರ್ ಅವರ ಹೆಸರು ನಾಮಕರಣ ಮಾಡುವ ಆಲೋಚನೆ ಇದ್ದು, ಇದಕ್ಕಾಗಿ ಎಲ್ಲರ ಸಹಕಾರ ಕೋರುತ್ತೇನೆ ಎಂದರು.

10,500 ಸಾವಿರ ಕೋಟಿ ಅನುದಾನ: 156 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ಅಭಿ ವೃದ್ಧಿಗೊಳಿಸಲಾಯಿತು. ಕೇಂದ್ರದ ಅನುದಾನದಲ್ಲಿ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೈಸೂರು-ಬೆಂಗಳೂರು 10 ಪಥದ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ. ಮಂಡಕಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದೇವೆ. ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿದೆ. ಕೇಂದ್ರ ರಸ್ತೆ ನಿಧಿಯಿಂದ ಮೈಸೂರು ಜಿಲ್ಲೆಗೆ 202 ಕೋಟಿ ರೂ. ಅನುದಾನ ತಂದಿದ್ದೇನೆ. ಇವುಗಳ ಹೊರತಾಗಿಯೂ ಮೈಸೂರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿ ಯವರು 10,500 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಕುಶಾಲನಗರಕ್ಕೆ ರೈಲು: ಕುಶಾಲನಗರದ ರೈಲು ಯೋಜನೆಗೆ ಈ ಹಿಂದೆಯೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 667 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಆದರೆ ಕಳೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಆದ್ಯತಾ ಪಟ್ಟಿಯಲ್ಲಿ ಸೇರಿಸದ ಕಾರಣ ಯೋಜನೆ ಅನುಷ್ಠಾನ ಸಾಧ್ಯವಾಗಲಿಲ್ಲ. ಇದೀಗ ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಬಿಜೆಪಿ ಮೈಸೂರು ತಾಲೂಕು ಅಧ್ಯಕ್ಷ ಅರುಣ್‍ ಕುಮಾರ್ ಗೌಡ , ರಾಜ್ಯ ಪರಿಷತ್ ಸದಸ್ಯ ಇಲವಾಲ ರವಿ, ಹಿನಕಲ್ ಗ್ರಾಪಂ ಸದಸ್ಯೆ ಎನ್.ನೇಹಾ ನಯನ, ಮುಡಾ ಕಾರ್ಯಪಾಲಕ ಅಭಿಯಂತರ ಸುರೇಶ್‍ಬಾಬು ಇದ್ದರು.