ಹಸಿದ ಜನತೆ, ರೈತರ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ

ಕೆ.ಆರ್.ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಹಸಿದ ಜನರು ಹಾಗೂ ಮತ್ತು ರೈತರನ್ನು ಕಡೆಗಣಿಸಿದ್ದೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಸ್ವರಾಜ್ ಇಂಡಿಯಾ ಪಕ್ಷದ ತಾಲೂಕ ಅಧ್ಯಕ್ಷ ಗರಡುಗಂಭಸ್ವಾಮಿ ಆರೋಪಿಸಿದರು. ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದು, ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ಹಣ ವರ್ಗಾವಣೆ, ರೈತರ ಸಮಸ್ಯೆ ನಿವಾರಣೆ ಮಾಡುವಂತಹ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದರು. ದೇಶದಲ್ಲಿ ನೋಟು ಅಮಾನೀಕರಣದಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದು, ಅವರ ಕೋಮುವಾದಿ ನಿಲುವಿನಿಂದ ಜನರು ರೂಚ್ಚಿಗೆದ್ದಿರುವುದಕ್ಕೆ ಇಂದಿನ ಚುನಾವಣಾ ಫಲಿತಾಂಶವೇ ಸಾಕ್ಷಿ. ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಕೂಚಿಯಾಗಲಿದ್ದು, ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಎಲ್ಲಾ ಜಾತ್ಯಾತೀತ, ಪಕ್ಷಗಳು ಒಂದಗಾಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ನಾಯಕರು ಅಪರೇಷನ್ ಕಮಲ ಮಾಡುವುದನ್ನು ಬಿಟ್ಟು, ಸಮಿಶ್ರ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿದು, ರೈತರ ಸಮಸ್ಯೆಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡುವಂತೆ ಇದೇ ವೇಳೆ ಆಗ್ರಹಿಸಿದರು.