ಜೀವಕಳೆ ತುಂಬಿರುವ ಬಂಡೀಪುರ ಅಭಯಾರಣ್ಯ: ಕಣ್ಮನ ಸೆಳೆಯುತ್ತಿದೆ ವನ್ಯಜೀವಿಗಳ ಸ್ವಚ್ಛಂದ ಸಂಚಾರ

ಗುಂಡ್ಲುಪೇಟೆ: ರಾಷ್ಟ್ರದ ಅತ್ಯುನ್ನತ ಉದ್ಯಾನವನಗಳಲ್ಲಿ ಒಂದಾದ ಬಂಡೀಪುರ ಅಭಯಾರಣ್ಯದಲ್ಲಿ ಈಗ ಜೀವಕಳೆ ದಿನೇ ದಿನೇ ಹೆಚ್ಚುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ಸಾವಿರಾರು ಎಕರೆಯಷ್ಟು ಕಾಡ್ಗಿಚ್ಚಿನಿಂದಾಗಿ ಎಲ್ಲೆಲ್ಲೂ ಬರಡು ಭೂಮಿಯಂ ತಾಗಿತ್ತು. ಆದರೆ ಈಗ ಇಲ್ಲಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಎಲ್ಲೆಲ್ಲೂ ಹಚ್ಚ ಹಸಿರಿನ ಮೈಸಿರಿ. ಸಮೃದ್ಧಿಯಾಗಿ ರುವ ತುಂಬಿರುವ ಕೆರೆ ಕಟ್ಟೆಗಳು. ಸ್ವಚ್ಚಂದ ವಾಗಿ ವಿಹರಿಸುವ ವನ್ಯ ಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊಸದಾಗಿ ಚಿಗುರಿದ ಹುಲ್ಲನ್ನು ಮೇಯಲು ಹರಿಣಗಳು ಹಾಗೂ ಆನೆ ಗಳು ಹಿಂಡು-ಹಿಂಡಾಗಿ ರಸ್ತೆ ಬದಿಯಲ್ಲಿ ಕಂಡುಬರುತ್ತಿದ್ದು ಪ್ರವಾಸಿಗರಲ್ಲಿ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾ ಣಿಕರಲ್ಲಿ ಸಂತಸವನ್ನು ತುಂಬುತ್ತಿದೆ.

ಪ್ರತಿ ದಿನವೂ ಸಾವಿರಾರು ಪ್ರವಾಸಿಗರು ಆಗಮಿಸುವ ಈ ಉದ್ಯಾನವನದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ಎದ್ದು ಕಾಣುತ್ತಿದೆ. ಅದರೊಂದಿಗೆ ಬೆಳಗ್ಗೆ ಹಾಗೂ ಸಂಜೆ ಯಾಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆಯನ್ನು ನೋಡಲು ಪ್ರವಾಸಿಗರು ಬಂಡೀಪುರಕ್ಕೆ ಮತ್ತೆ ಮತ್ತೆ ಬರಬೇಕು ಎನ್ನಿಸುವಂತಿದೆ.

ನೂರಾರು ಸಂಖ್ಯೆಯಲ್ಲಿ ರಸ್ತೆಯ ಪಕ್ಕ ದಲೇ ತಮ್ಮ ಸಂಸಾರ ಸಮೇತರಾಗಿ ಆಗ ಮಿಸುವ ಚುಕ್ಕೆ ಜಿಂಕೆಗಳ ಅಂದವನ್ನು ಕಣ್ತುಂಬಿಸಲು ಹಾಗೂ ತಮ್ಮ ಮೊಬೈಲ್ ಗಳಲ್ಲಿ ಅವುಗಳ ಫೋಟೋವನ್ನು ಸೆರೆಡಿಯಲು ಪ್ರವಾಸಿಗರು ಮುಗಿಬೀಳು ತ್ತಿದ್ದಾರೆ. ಒಮ್ಮೊಮ್ಮೆ ಮರದ ಎಲೆಗಳನ್ನು ಎಟುಕಿಸಲು ಮುಂಗಾಲೆತ್ತಿ ಎಗರುವ ದೃಶ್ಯ ಮನೋಹರ ಅನುಭವ ನೀಡುತ್ತದೆ. ತನ್ನ ಆಹಾರವನ್ನು ತಿನ್ನಲು ಬರುವ ಸಹಪಾಠಿಯೊಡನೆ ಕಾಲು ಕೆರೆದು ಜಗಳಕ್ಕೆ ಬೀಳುವಾಗ ಅವುಗಳ ಕೊಂಬು ಗಳ ಕಟಕಟ ಶಬ್ದ ಮಾಡುವುದು ಕೋಲಾಟವನ್ನು ನೆನಪಿಸುತ್ತದೆ.

ಕಳೆದ ಬಾರಿ ಬಿರು ಬೇಸಿಗೆಯಿಂದ ಒಣಗಿ ನಿಂತಿದ್ದ ಮರಗಿಡಗಳು ಈ ಬಾರಿ ಉತ್ತಮ ಮಳೆಯಿಂದಾಗಿ ಹಚ್ಚ ಹಸಿರಿ ನಿಂದ ಕಂಗೊಳಿಸುತ್ತಿವೆ. ಎತ್ತ ನೋಡಿ ದರೂ ದಟ್ಟ ಹಸಿರಿನ ಹೊದಿಕೆ ಹೊದ್ದ ಬಂಡೀಪುರವು ವನಜೀವಿ ಪ್ರಿಯರಲ್ಲಿ ‘ಯಾರೆ ನೀನು ಸುಂದರ ಚಲುವೆ ಒಬ್ಬಳೆ ನಿಂತಿರುವೆ.
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ’ ಎಂಬ ಪ್ರಕೃತಿ ವರ್ಣನೆಯ ಹಂಸಲೇಖರ ಸಾಹಿತ್ಯದ ಸಾಲುಗಳನ್ನು ನೆನೆಪಿಸಿ ಕೊಳ್ಳುವಂತೆ ಮಾಡುತ್ತಿದೆ.

 

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ 874ಕ್ಕೂ ಹೆಚ್ಚು ಕೆರೆ ಕಟ್ಟೆಗಳು ಈ ಬಾರಿಯ ಉತ್ತಮವಾದ ಮಳೆಯಿಂದ ತುಂಬಿ ತುಳುಕುತ್ತಿದ್ದು, ವನ್ಯ ಜೀವಿಗಳಿಗೆ ನೀರಿನ ಬರವನ್ನು ನೀಗಿಸಿದೆ. ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರದ ಅರಣ್ಯ ಮತ್ತು ಬೆಟ್ಟ ಗುಡ್ಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. – ಅಂಬಾಡಿ ಮಾಧವ್, ಹುಲಿಯೋಜನೆ ನಿರ್ದೇಶಕ, ಬಂಡೀಪುರ

 

ಬಂಡೀಪುರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಣದಷ್ಟು ಸಂಖ್ಯೆಯಲ್ಲಿ ಜಿಂಕೆ, ಆನೆ, ನವಿಲು, ಕಾಡುಹಂದಿ, ಚಿರತೆ ಹಾಗೂ ಹುಲಿಗಳು ಕಂಡುಬರುತ್ತಿವೆ. ಮಧುಮಲೆ ಮಾರ್ಗದಲ್ಲಿಯೂ ಹೆಚ್ಚಿನ ವನ್ಯಜೀವಿಗಳು ದರ್ಶನ ನೀಡುತ್ತಿರುವುದು ನಮ್ಮಲ್ಲಿ ನಮ್ಮ ಬಂಡೀಪುರ ಉದ್ಯಾನವನದ ಹಿರಿಮೆಯನ್ನು ಸಾರುತ್ತಿದೆ. ಡಿಸೆಂಬರ್ ಮಾಸದಲ್ಲಿ ಬಂಡೀಪುರವನ್ನು ನೋಡುವುದೇ ಸ್ವರ್ಗ. – ಜಿ.ಎಸ್.ಗಣೇಶ್‍ಪ್ರಸಾದ್, ಪ್ರಕೃತಿಪ್ರಿಯ, ಗುಂಡ್ಲುಪೇಟೆ.