ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಅಗ್ರಹಾರದಲ್ಲಿ ಬುಧ ವಾರ ಸಂಜೆ ಸಂಭವಿಸಿದೆ. ಅಗ್ರಹಾರದ ರಾಮಾನುಜ ರಸ್ತೆ ನಿವಾಸಿ ಕುಮಾರ್ ಅವರ ಮಗ ರಘು(38) ನೇಣಿಗೆ ಶರಣಾದವರು. ಅಂಗವಿಕಲರಾದ ರಘು, ಮೈಸೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಸುಮಾರು 5.45 ಗಂಟೆ ವೇಳೆಗೆ ಮನೆಯ 2ನೇ ಮಹಡಿ ಕೊಠಡಿಯಲ್ಲಿ ರಘು ನೇಣು ಹಾಕಿಕೊಂಡಿ ದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸಹೋದರ ಮಂಜುನಾಥ ಹಾಗೂ ಮನೆಯವರು ಆತನನ್ನು ಜೆಎಸ್‍ಎಸ್ ಆಸ್ಪತ್ರೆಗೆ ಕರೆದೊಯ್ದರಾದರೂ ರಘು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಕೆ.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಂದು ಬೆಳಿಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಒಪ್ಪಿಸಿದರು.