ಬಸ್‍ಸ್ಟಾಪ್‍ನಲ್ಲಿದ್ದ ಅಸ್ವಸ್ಥನನ್ನು  ಆಸ್ಪತ್ರೆಗೆ ದಾಖಲಿಸಿದ ಎಂಕೆಎಸ್

ಮೈಸೂರು, ಜ.18 (ಎಸ್‍ಬಿಡಿ)- ಅನಾರೋಗ್ಯದಿಂದ ತೀವ್ರವಾಗಿ ಬಳಲಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಮಾನವೀಯತೆ ಮೆರೆದಿದ್ದಾರೆ. ಮೈಸೂರು-ಮಾನಂದವಾಡಿ ರಸ್ತೆ, ರೈಲ್ವೆ ವರ್ಕ್‍ಶಾಪ್ ಸಮೀಪದ ಪ್ರಯಾಣಿಕರ ತಂಗುದಾಣದಲ್ಲಿ ನರಳುತ್ತಾ ಮಲಗಿದ್ದ ಅಪರಿಚಿತನನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೆಲ ದಿನಗಳಿಂದ ಆಹಾರ ಕಲ್ಪಿಸಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆ ವ್ಯಕ್ತಿ, ಮೇಲೇಳಲಾಗದ ಸ್ಥಿತಿಯಲ್ಲಿದ್ದರು. ತೊಟ್ಟಿದ್ದ ಬಟ್ಟೆ ಕೊಳಕಾಗಿದ್ದವು. ಬಟ್ಟೆ ತುಂಬಿದ್ದ ಹಳೇ ಬ್ಯಾಗ್ ಮೇಲೆ ತಲೆಯಿಟ್ಟು, ಮಲಗಿದ್ದರು.

ಮೂರ್ನಾಲ್ಕು ದಿನಗಳಿಂದ ಮಲಗಿದ್ದ ಸ್ಥಿತಿಯಲ್ಲೇ ಇದ್ದ ವ್ಯಕ್ತಿಯ ಬಗ್ಗೆ ಸ್ಥಳೀಯರು ಶುಕ್ರವಾರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ತಿಳಿಸಿದ್ದರು. ಮಧ್ಯಾಹ್ನ ಸ್ಥಳಕ್ಕೆ ತೆರಳಿದ ಎಂ.ಕೆ.ಸೋಮಶೇಖರ್, ನಿತ್ರಾಣವಾಗಿದ್ದ ಅಪರಿಚಿತನನ್ನು ಮಾತನಾಡಲು ಯತ್ನಿಸಿದರು. ಆದರೆ ಕತ್ತಿನ ಬಳಿ ಗಡ್ಡೆಯಾಗಿದ್ದರಿಂದ ಆತ ಮಾತನಾಡುವ ಸ್ಥಿತಿಯಲ್ಲಿರ ಲಿಲ್ಲ. ಬಳಿಕ ಆತನಿಗೆ ನೀರು ಕುಡಿಸಿ, ಸಂತೈಸಿದರು. ಊಟ ಮಾಡುತ್ತೀಯಾ ಎಂದು ಕೇಳಿದಾಗ ಟೀ ಬೇಕೆಂದು ಆತ ಸನ್ನೆ ಮಾಡಿದ. ಟೀ ತರಿಸಿ, ಕುಡಿಸಿದ ಬಳಿಕ, ಆ್ಯಂಬುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ಕಳುಹಿಸಿದರು. ಯುವಕರನ್ನೂ ಜೊತೆಯಲ್ಲಿ ಕಳುಹಿಸಿಕೊಟ್ಟು, ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಆಸ್ಪತ್ರೆಯ ಆರ್‍ಎಂಓಗೆ ಕರೆ ಮಾಡಿ, ಹೊರಗಿನಿಂದ ಔಷಧಿ ಕೊಳ್ಳಬೇಕಿದ್ದರೆ ತಿಳಿಸಿ ಎಂದು ಹೇಳಿದರು.

ಇದೇ ರೀತಿ 15 ದಿನಗಳ ಹಿಂದೆ ರಾಮಸ್ವಾಮಿ ವೃತ್ತದ ಬಳಿ ನಿತ್ರಾಣವಾಗಿ ಬಿದ್ದಿದ್ದ ನಂಜನಗೂಡು ಮೂಲದ ವ್ಯಕ್ತಿಯನ್ನು, ಎಂ.ಕೆ.ಸೋಮಶೇಖರ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರಲ್ಲದೆ, ಔಷಧಿ, ಹಣ್ಣು ನೀಡಿ ಆರೈಕೆ ಮಾಡಿದ್ದರು. ಕೆಲ ದಿನಗಳಲ್ಲಿ ಗುಣಮುಖನಾದ ಆ ವ್ಯಕ್ತಿ, ಸೋಮಶೇಖರ್‍ಗೆ ಧನ್ಯವಾದ ಹೇಳಿ, ಊರಿಗೆ ಹೋಗುವುದಾಗಿ ತಿಳಿಸಿ, ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು