ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

ಮೈಸೂರು, ಏ.21(ಆರ್‍ಕೆ) ರಿಂಗ್‍ರಸ್ತೆಯಲ್ಲಿ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಯನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಿನಕಲ್ ನಿವಾಸಿ ಮಲ್ಲೇಶ್ ಬಂಧಿತ. ಕೋಳಿಯ ಪುಕ್ಕ ಇನ್ನಿತರ ತ್ಯಾಜ್ಯವನ್ನು ರಿಂಗ್‍ರಸ್ತೆ ಪಕ್ಕದಲ್ಲಿ ಸುರಿಯುವಾಗ ಸಿಕ್ಕಿಬಿದ್ದಿದ್ದಾರೆ. ಎಲ್ಲೆಡೆ ಕೊರೊನಾ ಭೀತಿ ಇದೆ. ಅಲ್ಲದೆ ಇತ್ತೀಚೆಗಷ್ಟೇ ಹಕ್ಕಿಜ್ವರದಿಂದ ಅನೇಕ ಕೋಳಿಗಳು ಮೃತಪಟ್ಟಿದ್ದರಿಂದ ಜನ ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಅವಶ್ಯ. ಆದರೆ ಚಿಕನ್ ಹಾಗೂ ಮಟನ್ ಅಂಗಡಿಗಳ ರಾಶಿ ರಾಶಿ ತ್ಯಾಜ್ಯವನ್ನು ರಿಂಗ್‍ರಸ್ತೆಯಲ್ಲಿ ಸುರಿಯಲಾಗಿತ್ತು. ಈ ಬಗ್ಗೆ ಮಾಜಿ ಸಚಿವರಾದ ಜಿ.ಟಿ.ದೇವೇಗೌಡರು, ಪೊಲೀಸರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಇನ್‍ಸ್ಪೆಕ್ಟರ್ ಬಾಲಕೃಷ್ಣ ಹಾಗೂ ಸಿಬ್ಬಂದಿ, ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ಮಲ್ಲೇಶ್‍ನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ನಗರ ಪಾಲಿಕೆ ವತಿಯಿಂದ ತ್ಯಾಜ್ಯವನ್ನೆಲ್ಲಾ ವಿಲೇವಾರಿ ಮಾಡಲಾಗುತ್ತದೆ. ಇನ್ನು ಮುಂದೆ ಈ ರೀತಿಯಲ್ಲಿ ಯಾರೂ ತ್ಯಾಜ್ಯ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತ ಕಾಂತರಾಜ್ ಅವರಿಗೆ ಜಿಟಿಡಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.