ಮದುವೆ ಭಾಗ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದ ಯುವತಿಗೆ ಕಂಕಣ ಭಾಗ್ಯ

ಮಡಿಕೇರಿ:  ಪ್ರಾಕೃತಿಕ ವಿಕೋಪದಿಂದ ಸಪ್ತಪದಿ ತುಳಿಯುವ ಭಾಗ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಪ್ರೀತಿಯ ಪುತ್ರಿಯ ವಿವಾಹ ಸಮಾರಂಭ ವನ್ನು ಪೂರ್ವ ನಿರ್ಧರಿತ ಮುಹೂರ್ತದಲ್ಲೆ ನಡೆಸುವ ಮೂಲಕ ಸಂಕಷ್ಟದ ನಡುವೆಯೂ ಬಡ ದಂಪತಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನಗರದ ಸಮುದ್ರ ಕಲ್ಯಾಣ ಮಂಟಪದಲ್ಲಿ ಮಡಿಕೇರಿ ತಾಲೂಕಿನ ಅರೆ ಕಾಡು ಗ್ರಾಮದ ಧನಂಜಯ್ ಮತ್ತು ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಗಳನ್ನು ಕಳೆದುಕೊಂಡ ಹಟ್ಟಿಹೊಳೆಯ ಪದ್ಮಿನಿ-ಉಮೇಶ್ ದಂಪತಿಗಳ ಪುತ್ರಿ ಕುಸುಮಾ ಅವರನ್ನು ವಿವಾಹವಾಗುವ ಮೂಲಕ, ಕಷ್ಟಗಳ ಸರಮಾಲೆಯ ನಡುವೆ ಸಂತಸದ ಶುಭಘಳಿಕೆ ಕೂಡಿ ಬಂದಿದೆ. ಹಟ್ಟಿಹೊಳೆಯ ಆ ಪುಟ್ಟ ಮನೆಯ ಒಡೆಯರಾದ ಉಮೇಶ್, ಪದ್ಮಿನಿ ದಂಪತಿಗಳು, ತಮ್ಮ ಮಗಳು ಕುಸುಮ ಳನ್ನು ಅರೆಕಾಡು ಗ್ರಾಮದ ಧನಂಜಯ್‍ನೊಂದಿಗೆ ವಿವಾಹ ಮಾಡಿಕೊಡಲು ನಿರ್ಧರಿಸಿ, ನಿಶ್ಚಿತಾರ್ಥವನ್ನು ಪೂರೈಸಿದ್ದಲ್ಲದೆ, ಮಗಳ ಮೆಚ್ಚುಗೆಯ ಒಡವೆ, ವಸ್ತ್ರಗಳನ್ನು ಮಾಡಿ ಮನೆಯಲ್ಲಿರಿಸಿದ್ದರು. ವರ್ಷಂಪ್ರತಿಯಂತೆ ಸುರಿಯುತ್ತಿದ್ದ ಮಳೆಯೇ ಮನೆಯ ಸಂತಸವನ್ನು ಕಿತ್ತೊಗೆಯುತ್ತದೆಂದು ತಿಳಿದವರಾದರು ಯಾರು. ಆಗಸ್ಟ್ 15 ರ ಬಳಿಕ ಸುರಿದ ಮಹಾಮಳೆಗೆ ಹಟ್ಟಿಹೊಳೆಯ ಮನೆಯ ಮೇಲೆ ಇಡೀ ಗುಡ್ಡ ಕುಸಿದು ಕುಟುಂಬದ ಬದುಕನ್ನಷ್ಟೆ ಅಲ್ಲ, ಮುಂದೆ ಬಾಳಿ ಬದುಕಬೇಕಾದ ಮಗಳ ಭವಿಷ್ಯಕ್ಕೂ ಕುತ್ತು ತಂದದ್ದು ದಂಪತಿಗಳನ್ನು ಆತಂಕಕ್ಕೆ ಈಡು ಮಾಡಿತ್ತು. ಹೀಗಿದ್ದೂ ಇದರಿಂದ ಧೃತಿಗೆಡದ ದಂಪತಿಗಳು ಪೂರ್ವ ನಿರ್ಧರಿತವಾಗಿದ್ದಂತೆ ಗುರುವಾರ ನಗರದ ಕಲ್ಯಾಣ ಮಂಟಪದಲ್ಲಿ ಮಗಳ ವಿವಾಹವನ್ನು ಬಂಧು ಮಿತ್ರರ ಸಹಕಾರದೊಂದಿಗೆ ನಡೆಸಿಕೊಟ್ಟಿದ್ದಾರೆ. ಆ ಮೂಲಕ ನವಜೋಡಿಯ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಿಸಿದ್ದಾರೆ.