ಗಿರಿಯಾಬೋವಿಪಾಳ್ಯದಲ್ಲಿ ಯುವಕನ ಬರ್ಬರ ಹತ್ಯೆ

ಇಬ್ಬರ ಬಂಧನ, ತಲೆಮರೆಸಿಕೊಂಡಿರುವ ಇತರರ ಪತ್ತೆಗೆ ಶೋಧ
ಮೈಸೂರು: ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನನ್ನು ಫೈಬರ್ ಪೈಪ್, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ಮೈಸೂರಿನ ಗಿರಿಯಾಬೋವಿಪಾಳ್ಯದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ನಜರ್‍ಬಾದ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರ ನಿವಾಸಿ ಸವೇರಪ್ಪ ಅವರ ಮಗ ಚಿನ್ನಸ್ವಾಮಿ ಅಲಿಯಾಸ್ ಬಾಬು(22) ಹತ್ಯೆಯಾದ ಯುವಕ. ಈ ಸಂಬಂಧ ಪವನ್ ಮತ್ತು ಮನೋಜ್ ಎಂಬುವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರೇಮ್‍ಸಾಗರ್, ಪ್ರಜ್ವಲ್ ಹಾಗೂ ಇತರರ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಸರ್ವೀಸ್ ಸ್ಟೇಷನ್‍ವೊಂದರಲ್ಲಿ ಕೆಲಸ ಮಾಡು ತ್ತಿದ್ದ ಚಿನ್ನಸ್ವಾಮಿಯನ್ನು ಕರೆದೊಯ್ದು ಗಿರಿಯಾಬೋವಿಪಾಳ್ಯದ ಸ್ಮಶಾನದ ಬಳಿ ಫೈಬರ್ ಪೈಪ್, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಸೋಮವಾರ ರಾತ್ರಿ 10.45 ಗಂಟೆ ವೇಳೆ ಕೊಲೆ ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ರಾತ್ರಿ ಘಟನಾ ಸ್ಥಳಕ್ಕೆ ತೆರಳಿದ ನಜರ್‍ಬಾದ್ ಠಾಣೆ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ ಹಾಗೂ ಸಿಬ್ಬಂದಿ ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು. ಬೆರಳಚ್ಚು ಮುದ್ರೆ ಘಟಕ ಹಾಗೂ ಶ್ವಾನದಳದ ಸಿಬ್ಬಂದಿ ಕೊಲೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಚಿನ್ನಸ್ವಾಮಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ದೇವರಾಜ ಉಪವಿಭಾಗದ ಎಸಿಪಿ ಎಸ್.ಜಿ.ಗಜೇಂದ್ರ ಪ್ರಸಾದ್ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಇನ್‍ಸ್ಪೆಕ್ಟರ್ ಮಹದೇವ ಸ್ವಾಮಿ, ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು.