ಸಿಎಎಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಶಾಸಕ ಕೆ.ಜಿ.ಬೋಪಯ್ಯ ಮನವರಿಕೆ

ವಿರಾಜಪೇಟೆ, ಜ.9- ಪೌರತ್ವ ತಿದ್ದು ಪಡಿ ಕಾಯ್ದೆಯಲ್ಲಿ ಭಾರತದ ಮುಸ್ಲಿಮ ರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ. ಬಹುತೇಕ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆಯ ಬಗ್ಗೆ ಮಾಹಿತಿಯ ಕೊರತೆ ಕಂಡುಬಂದಿರುವುದಾಗಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ಸು ನಿಲ್ದಾಣ ದವರೆಗೆ ಅಲ್ಪಸಂಖ್ಯಾತರ ಅಂಗಡಿ ಮಳಿಗೆ ಗಳಿಗೆ ಭೇಟಿ ನೀಡಿ ಪೌರತ್ವ ಕಾಯ್ದೆಯ ಬಗ್ಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ಬೋಪಯ್ಯ ಅವರ ತಂಡ ಜನ ಜಾಗೃತಿ ಅಭಿಯಾನ ನಡೆಸಿತು. ಬಳಿಕ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಭಾಂದವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಅಲ್ಪಸಂಖ್ಯಾ ತರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರಲ್ಲದೆ, ಪೌರತ್ವ ಕಾಯ್ದೆ ಅಡಿಯಲ್ಲಿ ಪಾಕಿಸ್ಥಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೆ ಒಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆನಿಂತ 2014ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದ ಹಿಂದು, ಬೌಧ, ಸಿಖ್, ಪಾರ್ಸಿ, ಹಾಗೂ ಕ್ರೈಸ್ತರಿಗೆ ಪೌರತ್ವ ನೀಡಲಾಗುವುದು. ಈ ಸಂಬಂಧ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಮ್ಮನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯ ಗಳನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಮಹಿಳಾ ಮೋರ್ಚಾ ಯಮುನಾ ನಾಣಯ್ಯ, ಬಿ.ಜಿ. ಸಾಯಿನಾಥ್ ನಾಯಕ್, ಮಲ್ಲಂಡ ಮಧು ದೇವಯ್ಯ, ಜೋಕಿಂ ರೋಡ್ರಿಗಸ್, ಬಿಜೆಪಿ ತಾಲೂಕು ಸಮಿತಿಯ ಅರುಣ್ ಭೀಮಯ್ಯ, ನಗರ ಸಮಿತಿಯ ಅನೀಲ್ ಮಂದಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಅನಿತಾ, ಬಿ.ಜೂನಾ, ಸುನೀತ, ಹರ್ಷವರ್ಧನ ಮತ್ತಿತರರು ಉಪಸ್ಥಿತರಿದ್ದರು.