ಕಾದಂಬರಿ ಆಧಾರಿತ ಚಿತ್ರ ನಿರ್ಮಾಣ ವೇಳೆ ಅಗತ್ಯ ಬದಲಾವಣೆ ಅನಿವಾರ್ಯ

ಮೈಸೂರು, ಜು.13(ಎಸ್‍ಬಿಡಿ)- ಕಾದಂಬರಿ ಆಧಾರಿತ ಸಿನಿಮಾ ನಿರ್ಮಿಸುವಾಗ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳು ವುದು ಅನಿವಾರ್ಯ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ತಿಳಿಸಿದರು.

`ಮೈಸೂರು ಸಾಹಿತ್ಯ ಸಂಭ್ರಮ’ದ ಭಾಗವಾಗಿ ಸಭಾಂಗಣದ ದರ್ಬಾರ್ ಹಾಲ್‍ನಲ್ಲಿ ನಡೆದ `ಚಲನಚಿತ್ರ ಪ್ರಪಂಚದಲ್ಲಿ ನಿರ್ದೇಶಕರ ಕಮಾಲ್’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಕಾದಂಬರಿಗಳನ್ನು ಸಿನಿಮಾ ಮಾಡುವಾಗ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆರ್.ಕೆ.ನಾರಾಯಣ್ ಅವರ `ದಿ ಫೈನಾನ್ಷಿಯಲ್ ಎಕ್ಸ್‍ಪರ್ಟ್’ ಕಾದಂಬರಿಯನ್ನು `ಬ್ಯಾಂಕರ್ ಮಾರ್ಗಯ್ಯ’ ಸಿನಿಮಾವಾಗಿ ನಿರ್ಮಿಸುವಾಗ ತುಂಬಾ ಎಚ್ಚರಿಕೆ ವಹಿಸಲಾಗಿತ್ತು. ವಿದೇಶದಲ್ಲಿದ್ದ ಆರ್.ಕೆ.ನಾರಾಯಣ್ ಅವರೊಂದಿಗೆ ವರ್ಷ ಗಟ್ಟಲೆ ಪತ್ರ ಸಂವಹನ ನಡೆಸಿದ್ದೆ. ಪ್ರತಿಯೊಂದು ಸ್ಕ್ರಿಪ್ಟ್‍ಗಳನ್ನು ಓದಿ ಅನುಮತಿಸಿದ್ದರು. ಸಿನಿಮಾಗೆ ಬೇಕಾದಂತೆ ಪಾತ್ರಗಳ ಸಂಭಾಷಣೆಯನ್ನು ಸಂಕ್ಷಿಪ್ತಗೊಳಿಸಿದ್ದನ್ನು ಒಪ್ಪಿದ್ದರೆಂದು ಸ್ಮರಿಸಿಕೊಂಡರು.

ಇದಕ್ಕೆ ಪೂರಕವಾಗಿ ಮಾತನಾಡಿದ ಮತ್ತೋರ್ವ ನಿರ್ದೇಶಕ ಬಿ.ಸುರೇಶ್, ಗಿರೀಶ್ ಕಾಸರವಳ್ಳಿ ಅವರ `ಮನೆ’ ಸಿನಿಮಾ ನೋಡಿದ ನಂತರ ನಾನು ಕಾದಂಬರಿ ಓದುವ ರೀತಿಯೇ ಬದಲಾಯಿತು. ಕಾದಂ ಬರಿಯ ಒಂದು ಎಳೆಯನ್ನು ತೆಗೆದುಕೊಂಡು ಹೊಸದಾಗಿಯೇ ಕತೆ ಹೆಣೆಯುತ್ತಿದ್ದರು. ಲೇಖಕಿ ವೈದೇಹಿ ಅವರು ಈ ಬದಲಾವಣೆಯನ್ನು ಸ್ವಾಗತಿಸಿ ದ್ದಲ್ಲದೆ, ಕಾದಂಬರಿ ಆಧಾರಿತ ಚಿತ್ರಗಳು ಒಂದೇ ಮರದಲ್ಲಿ ಟಿಸಿಲೊಡೆದ ಕೊಂಬೆಯಿದ್ದಂತೆ ಎಂದು ವಿಶ್ಲೇಷಿಸಿದ್ದರು. ಈ ರೀತಿ ಎಲ್ಲಾ ಲೇಖಕರು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕೆಂದು ಹೇಳಿದರು.

ಟಿ.ಎಸ್.ನಾಗಾಭರಣ ಮಾತನಾಡಿ, ಪ್ರತಿ ಯೊಬ್ಬರ ಮನಸ್ಸಿನಲ್ಲೂ ವಿಭಿನ್ನ ಕನಸುಗಳಿರು ತ್ತವೆ. ಹಾಗಾಗಿ ನಿರ್ದೇಶಕನಾದವನು ಎಲ್ಲರ ಮನಸ್ಸನ್ನೂ ಸೆಳೆಯುವ ಪ್ರಯತ್ನ ನಡೆಸುತ್ತಾನೆ. ಪ್ರತಿಯೊಂದು ಸಿನಿಮಾವೂ ಹೊಸ ಕಲಿಕೆಯಾಗಿ ರುತ್ತದೆ. ವಿಭಿನ್ನ ವಿಚಾರಗಳ ಹುಡುಕಾಟ ಪ್ರಯತ್ನ ನಿರಂತರವಾಗಿರುತ್ತದೆ. ಹೇಳಿಕೊಳ್ಳ ಲಾಗದ ಸವಾಲುಗಳು ಎದುರಾಗುತ್ತವೆ. ನಿರ್ದೇ ಶಕನಿಗೆ ಮಾನವಬಲ, ಭಾವನೆ, ಸಮಯ, ಹಣ ಕಾಸು ನಿರ್ವಹಣೆ ತಿಳಿದಿರಬೇಕು. ವ್ಯಾಪಾರಿ ಮನೋಭಾವದ ಸಿನಿಮಾ ಹಾಗೂ ಕಲಾತ್ಮಕ ಸಿನಿಮಾಗಳೆಂದು ವಿಭಾಗಿಸುವುದಕ್ಕಿಂತ ಸಿನಿಮಾ ದಿಂದ ಸಿಗುವ ಅನುಭವ ಮುಖ್ಯವಾಗುತ್ತದೆ. ನಮ್ಮ ದೃಷ್ಟಿಯಲ್ಲಿ ಸಿನಿಮಾ ಒಂದು ಜವಾಬ್ದಾರಿ ಯುತ ಪ್ರಾಡಕ್ಟ್. ಸಿನಿಮಾ ನೋಡುವ ಬದಲು ಓದುವ ಪ್ರಕ್ರಿಯೆ ಆರಂಭಿಸಬೇಕು. ಸಿನಿಮಾ ಒಂದು ಶಿಕ್ಷಣ. ನಾನು ಎಂದಿಗೂ ವಿದ್ಯಾರ್ಥಿ ಎಂದರು.

ಬಿ.ಸುರೇಶ್ ಮಾತನಾಡಿ, ಸೂರ್ಯನ ಕಿರಣ ಗಳು ಬಿದ್ದ ಮೇಲೆ ಅರಳುವ ಸೂರ್ಯ ಕಾಂತಿಯಂತೆ ನಾವೂ ಸಹ ಮಹನೀಯರ ಪ್ರಭಾವಕ್ಕೆ ಒಳಗಾಗಿರುತ್ತೇವೆ. ಪ್ರತಿದಿನ ಒಂದಿ ಲ್ಲೊಂದು ಸ್ಫೂರ್ತಿಯಿಂದ ನಮ್ಮನ್ನು ನಾವು ರೂಪಿಸಿಕೊಳ್ಳುತ್ತಿರುತ್ತೇವೆ. ಜೀವನದಲ್ಲಿ ಜಾಣತನಕ್ಕಿಂತ ತಪಸ್ಸು ಹಾಗೂ ತಾಳ್ಮೆ ಮುಖ್ಯ ವಾಗುತ್ತದೆ. ಎಲ್ಲವೂ ಅನುಭವದ ಹಾದಿಯಲ್ಲಿ ದಕ್ಕುತ್ತದೆ. ಸಿನಿಮಾಗೆ ಬರುವ ಇಚ್ಛೆಯಿದ್ದವರು ಮೊದಲು ನೀರಿಗೆ ಬೀಳುವ ಧೈರ್ಯ ಮಾಡ ಬೇಕು. ನಂತರ ಮೊಸಳೆ, ತಿಮಿಂಗಿಲ ಮಾದ ರಿಯ ಅಡ್ಡಿಗಳನ್ನು ದಾಟಿ, ಈಜುವ ಮೂಲಕ ದಡ ಸೇರಬೇಕೆಂದು ಕಿವಿಮಾತು ಹೇಳಿದರಲ್ಲದೆ, ಈಗ ಗುರು-ಶಿಷ್ಯ ಪರಂಪರೆಯಿಲ್ಲ. ಯಾರೊಂ ದಿಗೆ ಸಹಾಯಕರಾಗಿ ಕೆಲಸ ಮಾಡದವರೂ ಸಹ ಒಳ್ಳೆಯ ನಿರ್ದೇಶಕರಾಗಿ ಗುರುತಿಸಿಕೊಂಡಿ ದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿವೇಕ್ ನಿರೂಪಣೆಯಲ್ಲಿ ಈ ಇಬ್ಬರೂ ನಿರ್ದೇಶಕರು ತಮ್ಮ ಸಿನಿಮಾ ಜೀವನದ ಪ್ರಯಾಣವನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟರು.

ನಂತರ ನಡೆದ `ಗಿರೀಶ ಮಂಡಲದ ಸುತ್ತಾ ಒಂದು ಸುತ್ತು’ ಕುರಿತ ಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಚೈತನ್ಯ ಕರೇಹಳ್ಳಿ, ಮೈಸೂರು ರಂಗಾ ಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ಹಾಗೂ ತುಘಲಕ್ ಸಿನಿಮಾ ನಟ ವೆಂಕಟೇಶ್ ಪ್ರಸಾದ್ ಗಿರೀಶ್ ಕಾರ್ನಾಡ್ ಅವರ ವ್ಯಕ್ತಿತ್ವ ಹಾಗೂ ಒಡನಾಟವನ್ನು ಹಂಚಿಕೊಂಡರು. ಲೇಖಕಿ ಪ್ರೀತಿ ನಾಗರಾಜ್ ನಿರೂಪಿಸಿದರು.