ಆರ್ಯ ಈಡಿಗ ಸಮುದಾಯದ ಸಂಘಟನಾತ್ಮಕ ಹೋರಾಟ ಅಗತ್ಯ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಂ.ಕೆ.ಪೋತರಾಜು
ಮೈಸೂರು, ಜು.14(ಆರ್‍ಕೆಬಿ)- ಈಡಿಗ ಸಮುದಾಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನಾತ್ಮಕ ಹೋರಾಟ ಮಾಡಬೇಕಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತ ರಾಜು ಅಭಿಪ್ರಾಯಪಟ್ಟರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಆರ್ಯ ಈಡಿಗ ಯುವ ವೇದಿಕೆ ಭಾನುವಾರ ಆಯೋಜಿಸಿದ್ದ ಡಾ.ಟಿ.ಎಂ.ಚಂದನ ಅವರ `ಈಡಿಗ ಗೌಡರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಡಿಗ ಸಮುದಾಯ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕಿದೆ. ಅದಕ್ಕಾಗಿ ಸಂಘಟನೆ ಅಗತ್ಯವಿದೆ ಎಂದು ಹೇಳಿದರು.

ಪತ್ರಕರ್ತ ಲಕ್ಷ್ಮಣ್ ಕೊಡಸೆ ಮಾತನಾಡಿ, ಶಿಕ್ಷಣದಿಂದಲೇ ನಮ್ಮ ಅಭಿವೃದ್ಧಿ, ವಿಮೋಚನೆ ಎಂಬುದನ್ನು ಸಮುದಾಯಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕು. ನಮ್ಮ ಹಿರಿಯರು ಸಮಾಜದ ಸಂಘಟನೆ ಮತ್ತು ಏಕತೆಗೆ ಶ್ರಮಿಸಬೇಕು ಎಂದರು. ಕೆಪಿಎಸ್‍ಸಿ ಸದಸ್ಯ ಡಾ.ಲಕ್ಷ್ಮಿನರಸಯ್ಯ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯ ಕ್ರಮದಲ್ಲಿ ಮೈಸೂರು ಜಿಲ್ಲಾ ಆರ್ಯ ಈಡಿಗ ಯುವ ವೇದಿಕೆ ಅಧ್ಯಕ್ಷ ಎಸ್.ಪಿ.ಸೋಮಶೇಖರ್, ಲೇಖಕ ಟಿ.ಎ.ಚಂದನ, ರಂಗಕರ್ಮಿ ರಾಜಶೇಖರ್ ಕದಂಬ, ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎನ್.ಗಿರೀಶ್, ಪ್ರಧಾನ ಕಾರ್ಯದರ್ಶಿ ಎಸ್.ಟಿ.ರಾಜು ಇನ್ನಿತರರು ಉಪಸ್ಥಿತರಿದ್ದರು.