ಮೈಸೂರಿನ 4 ಮುಖ್ಯ ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲು ಪಾಲಿಕೆ ಚಿಂತನೆ

ಮೈಸೂರು,ಜೂ.29(ಆರ್‍ಕೆ)-ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ 4 ಮುಖ್ಯ ರಸ್ತೆಗಳಲ್ಲಿ ಸುಂದರ ಸ್ವಾಗತ ಕಮಾನುಗಳನ್ನು ಅಳವಡಿಸಲು ಮೈಸೂರು ಮಹಾನಗರಪಾಲಿಕೆ ಚಿಂತನೆ ನಡೆಸಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯ ಕೆ.ಆರ್. ಮಿಲ್ ಸಮೀಪ, ಹುಣಸೂರು ರಸ್ತೆಯ ಹೂಟ ಗಳ್ಳಿ ಬಳಿ, ನಂಜನಗೂಡು ರಸ್ತೆಯ ರಿಂಗ್ ರೋಡ್ ಜಂಕ್ಷನ್ ಸಮೀಪ ಹಾಗೂ ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್ ಸಮೀಪ ಭವ್ಯ ಸ್ವಾಗತ ಕಮಾನುಗಳನ್ನು ಅಳವಡಿಸಿ, ಮೈಸೂರು ನಗರಕ್ಕೆ ಆಗಮಿಸುವವರಿಗೆ ಸ್ವಾಗತ ಕೋರುವ ಹಾಗೂ ಪ್ರಮುಖ ಪ್ರವಾಸಿ ತಾಣಗಳ ಹೆಸರು ಮತ್ತು ಮಾರ್ಗಸೂಚಿಯನ್ನು ಬಿಂಬಿಸಲು ಮುಂದಾಗಿದೆ.

ಈ ಉದ್ದೇಶಕ್ಕಾಗಿ ವಿನ್ಯಾಸ ರಚಿಸಿ ಅದರಲ್ಲಿ ಪಾರಂಪರಿಕ ಸ್ಪರ್ಶ ಬರುವಂತೆ ನೋಡಿಕೊಳ್ಳ ಲಾಗಿದ್ದು, ಅಂತಿಮಗೊಳಿಸಲು ಪಾರಂಪರಿಕ ಇಲಾಖೆಯ ಅಭಿಪ್ರಾಯ ಮತ್ತು ಸಲಹೆಯನ್ನು ಕೋರಿ ವಿನ್ಯಾಸದೊಂದಿಗೆ ಸಲ್ಲಿಸಲಾಗಿದೆ.

ಒಂದು ಸ್ವಾಗತ ಕಮಾನಿಗೆ 15 ಲಕ್ಷ ರೂ.ನಂತೆ 60 ಲಕ್ಷ ರೂ.ಗಳನ್ನು ಮೈಸೂರು ನಗರಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿಡಲಾಗಿದ್ದು, 4 ಕಮಾನುಗಳನ್ನು ಅಳವಡಿಸಿ ಪೂರಕ ಪ್ರತಿಕ್ರಿಯೆ ಬಂದಲ್ಲಿ, 2ನೇ ಹಂತದಲ್ಲಿ ಕೆಆರ್‍ಎಸ್ ರಸ್ತೆ, ಬೋಗಾದಿ ರಸ್ತೆ, ಹೆಚ್.ಡಿ.ಕೋಟೆ ರಸ್ತೆ ಮತ್ತು ತಿ.ನರಸೀಪುರ ರಸ್ತೆಗಳಲ್ಲೂ ಅಳವಡಿ ಸಲು ಪಾಲಿಕೆಯು ನಿರ್ಧರಿಸಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಇರಲಿದ್ದು, ಪಾರಂಪರಿಕತೆಗೆ ಧಕ್ಕೆ ಬಾರದ ಹಾಗೆ ಅತ್ಯಂತ ಆಕರ್ಷಕವಾಗಿ ಸ್ವಾಗತ ಕಮಾನುಗಳ ವಿನ್ಯಾಸ ಸಿದ್ಧಗೊಳಿಸಲಾಗಿದ್ದು, ಪಾರಂಪರಿಕ ಇಲಾಖೆಯ ಒಪ್ಪಿಗೆ ನಂತರ ರಸ್ತೆಗಳಿಗೆ ಅಳವಡಿಸಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.