ರಾಮಾಯಣ, ಮಹಾಭಾರತ ಜಗತ್ತಿನ ವಿದ್ವಾಂಸರ ಮನ್ನಣೆಗೆ ಪಾತ್ರವಾದ ಮಹಾನ್ ಗ್ರಂಥಗಳು

ಮೈಸೂರು,ಜ.18(ಎಸ್‍ಪಿಎನ್)- ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ಜಗತ್ತಿನ ಎಲ್ಲಾ ವಿದ್ವಾಂಸರೂ ಮೆಚ್ಚಿದ ಉತ್ಕøಷ್ಟ ಗ್ರಂಥಗಳು ಎಂದು ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ್ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಮಾಧವ ಕೃಪಾದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಏರ್ಪಡಿಸಿದ್ದ ಕಾ.ಶ್ರೀ.ನಾಗರಾಜ ರಚನೆಯ `ಮಹಾಭಾರತ ಕಥಾಲೋಕ’ 3ನೇ ಮುದ್ರಣ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಮಾಯಣ ಮತ್ತು ಮಹಾಭಾರತ ಹಲವು ಮೌಲ್ಯಗಳನ್ನೊಳಗೊಂಡ ಮಹಾಗ್ರಂಥ. ಇಲ್ಲಿ ಶಕ್ತಿಯಿದೆ, ಯುಕ್ತಿ ಇದೆ, ಮಂತ್ರ-ತಂತ್ರವಿದೆ. ರಾಜ್ಯಾಡಳಿತ ಚಾತುರ್ಯವಿದೆ. ಜ್ಞಾನದ ಖನಿಯಿದೆ. ಪ್ರಕೃತಿಯ ಸೊಬಗಿದೆ. ಎಲ್ಲಾ ಆಯಾಮದಲ್ಲೂ ಮಹಾಭಾರತ ಮತ್ತು ರಾಮಾ ಯಣ ಕಾವ್ಯ ಓದುಗರಿಗೆ ರಸದೌತಣ ನೀಡುವ ಗ್ರಂಥ ಎಂದರೆ ತಪ್ಪಾಗಲಾರದು ಎಂದರು.

ಮಹಾಭಾರತ ಕಾವ್ಯದಲ್ಲಿ ಭಾರತದ ಇತಿಹಾಸ, ಪರಂಪರೆ, ಜನಜೀವನ, ಇಲ್ಲಿನ ಸಾಂಸ್ಕøತಿಕ ಬದುಕು ಎಲ್ಲವೂ ಅಡಗಿದೆ. ಈ ಮಹಾಕಾವ್ಯಗಳು ಆಂಗ್ಲಭಾಷೆಗೆ ತರ್ಜುಮೆ ಗೊಂಡ ನಂತರ ಭಾರತೀಯ ಇತಿಹಾಸವನ್ನು ಯುರೋಪ್ ವಿದ್ವಾಂಸರು ನೋಡುತ್ತಿದ್ದ ದೃಷ್ಟಿಕೋನವೇ ಬದಲಾಯಿತು. ಇದಕ್ಕೆ ಮಾಕ್ಸ್ ಮುಲ್ಲರ್ ಪರಿವರ್ತನೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದರು.

ಭಾರತದ ಸ್ವಾತಂತ್ರ್ಯ ಸಂಗ್ರಮದಲ್ಲಿ `ಭಾರತ್ ಮಾತಾಕೀ ಜೈ’ ಹಾಗೂ `ವಂದೇ ಮಾತರಂ’ ಜಯಘೋಷಗಳು ಸಮಸ್ತ ಭಾರತೀಯರನ್ನು ಒಂದುಗೂಡಿಸಿದ ಘೋಷ ವಾಕ್ಯಗಳು. ಸ್ವಾತಂತ್ರ್ಯ ಹೋರಾಟಗಾರರು ಒಮ್ಮೆ ಇವೆರಡು ಜಯಘೋಷ ಮೊಳಗಿಸಿದರೆ, ಬ್ರಿಟಿಷರಲ್ಲಿ ಕಂಪನ ಆರಂಭವಾಗುತ್ತಿತ್ತು. ಇವೆರಡು ಜಯಘೋಷಗಳು ಭಾರತೀಯ ಸ್ವಾತಂತ್ರ್ಯ ಹೋರಾಟ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಪರಿ ಎಂದರು.

ಅದರಂತೆ ಮಹಾಭಾರತದಲ್ಲಿ ಧರ್ಮರಾಜ ಮತ್ತು ಯಕ್ಷನ ನಡುವೆ ನಡೆದ ಪ್ರಶ್ನೋ ತ್ತರಗಳಲ್ಲಿ ಎರಡು ಪ್ರಶ್ನೆ-ಉತ್ತರಗಳನ್ನು ಎಲ್ಲಾ ಓದುಗರು ಗಮನಿಸಬೇಕು. ಧರ್ಮರಾಜ ನಿಗೆ ಯಕ್ಷ ಕೇಳಿದ ಪ್ರಶ್ನೆಗಳಲ್ಲಿ ಇವೆರಡು ಪ್ರಶ್ನೆಗಳು ಪ್ರಮುಖವಾದವು. ಮೊದಲನೆಯದು `ಈ ಜಗತ್ತಿನಲ್ಲಿ ಭೂಮಿಗಿಂತ ಭಾರವಾದ ವಸ್ತು ಯಾವುದು?’ ಅದಕ್ಕೆ ಉತ್ತರಿಸಿದ ಧರ್ಮರಾಜ `ಭೂಮಿಗಿಂತ ಬಾರವಾದ ವಸ್ತು ತಾಯಿ’. ಮತ್ತೊಂದು ಪ್ರಶ್ನೆ ಕೇಳಿದ ಯಕ್ಷ, `ಆಕಾಶಕ್ಕಿಂತ ಎತ್ತರವಾದ ವಸ್ತು’ ಯಾವುದು?. ಇದಕ್ಕೆ ಉತ್ತರಿಸಿದ ಧರ್ಮರಾಜ `ಆಕಾಶಕ್ಕಿಂತ ಎತ್ತರವಾದ ವಸ್ತು ತಂದೆ’ ಎಂದು ಹೇಳುತ್ತಾನೆ. ಇದಕ್ಕಿಂತ ಮೌಲ್ಯಯುತ ವ್ಯಾಖ್ಯಾನ ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಬೇಕೆ? ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ಅವಧೂತ ದತ್ತಪೀಠ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರದಾನ ಕಾರ್ಯದರ್ಶಿ ಈ.ಸಿ.ನಿಂಗರಾಜೇಗೌಡ, ಪ್ರೊ.ಸಾತನೂರು ದೇವರಾಜು, ಲೇಖಕ ಕಾ.ಶ್ರೀ.ನಾಗರಾಜು ಉಪಸ್ಥಿತರಿದ್ದರು.