ಕೊಡಗಲ್ಲಿ ಗುಂಡಿಕ್ಕಿ ಶಿಕ್ಷಕಿ ಹತ್ಯೆ

ಗೋಣಿಕೊಪ್ಪ: ಗುಂಡು ಹಾರಿಸಿ ಶಿಕ್ಷಕಿಯನ್ನು ಹತ್ಯೆ ಮಾಡಿದ ಕಾಫಿ ಬೆಳೆಗಾರ ನೋರ್ವ, ತಾನೂ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಾಳೆಲೆ ಗ್ರಾಮದ ಪೊಲೀಸ್ ಉಪ ಠಾಣೆ ಮುಂಭಾಗವೇ ಇಂದು ಬೆಳಿಗ್ಗೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಶಿಕ್ಷಕಿ ಯನ್ನು ರಕ್ಷಿಸಲು ಹೋದ ವಿದ್ಯಾರ್ಥಿ ಮತ್ತು ಕಾರ್ಮಿ ಕನಿಗೂ ಗುಂಡು ತಗುಲಿದ್ದು, ಅವರಿಬ್ಬರೂ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ಕಳತ್ಮಾಡು ಪ್ರೌಢಶಾಲೆ ಶಿಕ್ಷಕಿಯಾಗಿದ್ದು, ಬಾಳೆಲೆ ಗ್ರಾಮದಲ್ಲಿ ವಾಸಿಸುತ್ತಿದ್ದ ಆಶಾ ಕಾವೇರಮ್ಮ (53) ಹತ್ಯೆಯಾದವರಾಗಿದ್ದು, ಬಲ್ಯಮಂಡೂರು ಗ್ರಾಮದವನಾಗಿದ್ದು, ಪೊನ್ನಂಪೇಟೆಯಲ್ಲಿ ವಾಸಿಸುತ್ತಿದ್ದ ಮಾಚಿಮಾಡ ಜಗದೀಶ್ (67) ಶಿಕ್ಷಕಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಕಾಫಿ ಬೆಳೆಗಾರ.

ಇಂದು ಬೆಳಿಗ್ಗೆ 8.15ರ ಸುಮಾರಿಗೆ ಶಾಲೆಗೆ ಹೋಗಲು ಬಾಳೆಲೆ ಪೊಲೀಸ್ ಉಪ ಠಾಣೆ ಬಳಿ ಶಾಲಾ ಬಸ್‍ಗಾಗಿ ಶಿಕ್ಷಕಿ ಆಶಾ ಕಾವೇರಮ್ಮ ಕಾಯುತ್ತಿದ್ದ ವೇಳೆ ಜಗದೀಶ್ ಏಕಾಏಕಿ ಒಂಟಿ ನಳಿಕೆ ಬಂದೂಕಿನಿಂದ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ರಸ್ತೆಗುರುಳಿದ ಆಶಾ ಅವರನ್ನು ರಕ್ಷಿಸಲು ಬಾಳೆಲೆ ಕಾಲೇಜು ವಿದ್ಯಾರ್ಥಿ ದಿನೇಶ್ (17) ಮತ್ತು ಕಾರ್ಮಿಕ ಪೆಮ್ಮು (45) ಪ್ರಯತ್ನಿಸಿದಾಗ ಹಂತಕ ಜಗದೀಶ್ ಮತ್ತೆ ಗುಂಡು ಹಾರಿಸಿದ್ದು, ಪರಿಣಾಮ ದಿನೇಶ್‍ನ ಕೈ ಹಾಗೂ ಪೆಮ್ಮುವಿನ ತೊಡೆಗೆ ಗುಂಡೇಟು ತಗುಲಿದೆ. ನಂತರ ಜಗದೀಶ್ ಬಂದೂಕಿನೊಂದಿಗೆ ಕಾಫಿ ತೋಟ ದೊಳಗೆ ನುಸುಳಿ, ಪರಾರಿಯಾಗಿದ್ದಾನೆ.

ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಧಾವಿಸಿ ಬಂದ ತೋಟದ ಕೆಲಸಗಾರರು ಹಾಗೂ ಗ್ರಾಮಸ್ಥರು ಆಶಾ ಅವರನ್ನು ಜೀಪ್‍ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಆಶಾ ಅವರ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಗುಂಡೇಟು ಬಿದ್ದಿದೆ. ನಂತರ ಕಾಫಿ ತೋಟದಲ್ಲಿ ಹುಡುಕಾಟ ನಡೆಸಿದಾಗ ಕೃತ್ಯ ನಡೆದ ಸುಮಾರು 25 ಮೀ. ದೂರದಲ್ಲಿ ಒಂಟಿ ನಳಿಕೆ ಬಂದೂಕನ್ನು ಎದೆಗಪ್ಪಿಕೊಂಡಿರುವ ಸ್ಥಿತಿಯಲ್ಲಿ ಹಂತಕ ಜಗದೀಶ್‍ನ ಮೃತದೇಹ ಪತ್ತೆಯಾಗಿದೆ.

ಈ ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ದಿನೇಶ್ ಮತ್ತು ಪೆಮ್ಮು ಅವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ದೇಹದೊಳಗೆ ಹೊಕ್ಕಿದ್ದ ಗುಂಡುಗಳನ್ನು ಹೊರ ತೆಗೆಯಲಾಗಿದೆ. ಇವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಸುಮನಾ ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಶಿಕ್ಷಕಿ ಆಶಾ ಕಾವೇರಮ್ಮ ಗೌರವಾರ್ಥ ಲಯನ್ಸ್ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿತ್ತು. ಆಶಾ ಕಾವೇರಮ್ಮ ಅವರ ಪತಿ ಅದೇಂಗಡ ದಿನೇಶ್ ಚಂಗಪ್ಪ ಅವರು ಬ್ಯಾಂಕ್‍ವೊಂದರಲ್ಲಿ ಅಧಿಕಾರಿಯಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಅವರಲ್ಲಿ ಓರ್ವ ಪುತ್ರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಮತ್ತೋರ್ವ ಪುತ್ರಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಹೇಳಲಾಗಿದೆ. ಆಶಾ ಕೂಡ ತಾವು ಬೆಂಗಳೂರಿಗೆ ತೆರಳಿ ಪುತ್ರಿಯೊಂದಿಗೆ ವಾಸಿಸುವುದಾಗಿ ಹೇಳುತ್ತಿದ್ದರು. ಆದರೆ ಉತ್ತಮ ಶಿಕ್ಷಕಿಯಾಗಿದ್ದ ಅವರ ಮನವೊಲಿಸಿದ ಶಿಕ್ಷಣ ಸಂಸ್ಥೆಯವರು ಮತ್ತೊಂದು ವರ್ಷ ಸೇವೆ ಸಲ್ಲಿಸುವಂತೆ ಮನವೊಲಿಸಿದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ತೆರಳಲಿಲ್ಲ ಎಂದು ಮೂಲಗಳು ತಿಳಿಸಿವೆ.

ಹತ್ಯೆಗೆ ಕಾರಣ ಏನಿರಬಹುದು?: ಆಶಾ ಕಾವೇರಮ್ಮ ಅವರ ಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ ಎಂದು ಜಿಲ್ಲಾ ಎಸ್ಪಿ ಅವರು ಹೇಳುತ್ತಿದ್ದರಾದರೂ, ಗ್ರಾಮಸ್ಥರು ನೀಡುತ್ತಿರುವ ಮಾಹಿತಿಯಂತೆ ಆಶಾ ಅವರ ಪತಿ ನಿಧನ ಹೊಂದಿದ ನಂತರ ಬೆಳೆಗಾರ ಜಗದೀಶ್ ತನ್ನನ್ನು ವಿವಾಹವಾಗಬೇಕೆಂದು ಆಶಾ ಅವರನ್ನು ಪೀಡಿಸುತ್ತಿದ್ದ. ಆದರೆ ಅದನ್ನು ಆಶಾ ಅವರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪದೇ ಪದೆ ಆತ ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಶಿಕ್ಷಕಿ ಆಶಾ ಅವರ ಮನೆಯ ಕೆಲಸದಾಕೆಗೆ ಕಿರುಕುಳ ನೀಡಿದ ಕಾರಣ ಎರಡು ವರ್ಷಗಳ ಹಿಂದೆ ಜಗದೀಶ್ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿ ಆತ ಸುಮಾರು 2 ತಿಂಗಳು ಸೆರೆವಾಸ ಅನುಭವಿಸಿದ್ದ. ಜೈಲಿನಿಂದ ಹೊರ ಬಂದ ನಂತರ ಆಶಾ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಅವರ ಭಾವಚಿತ್ರದೊಂದಿಗೆ ಅಶ್ಲೀಲವಾದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಹಾಗೂ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪದ ಮೇರೆಗೆ ಆಶಾ ಅವರು ಜಗದೀಶ್ ವಿರುದ್ಧ ಕೇಸ್ ದಾಖಲಿಸಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಪೊನ್ನಂಪೇಟೆ ಪೊಲೀಸ್ ಮೂಲಗಳು ಜಗದೀಶ್ ವಿರುದ್ಧ ಎರಡು ಕೇಸ್‍ಗಳನ್ನು ಆಶಾ ದಾಖಲಿಸಿದ್ದರು ಎಂದು ತಿಳಿಸಿವೆ.