ಮೈಸೂರು, ಜ.11(ಎಂಕೆ)- ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ನಗರದ ನಂಜರಾಜ ಬಹದ್ದೂರ್ ಛತ್ರದ ಆವರಣ ದಲ್ಲಿ ಜಮಾಯಿಸಿದ ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಪಂಜುಗಳನ್ನು ಹಿಡಿದು, ಜೈಕಾರ ಕೂಗಿದರು. ದೇಶದ ಏಕತೆ ಮತ್ತು ಅಭಿ ವೃದ್ಧಿಗಾಗಿ ಪೌರತ್ವ ಕಾಯಿದೆ ಜಾರಿಯಾಗಬೇಕು ಎಂದು ಪ್ರತಿಪಾದಿಸಿದರು. ಪೌರತ್ವ ತಿದ್ದುಪಡಿ ಕಾಯಿದೆ ಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾಂಗ್ರೆಸ್, ಅಲ್ಪಸಂಖ್ಯಾತರನ್ನು ಕಾಯಿದೆ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂಜರಾಜ ಬಹದ್ದೂರ್ ಛತ್ರದಿಂದ ಪ್ರಾರಂಭ ವಾದ ಪಂಜಿನ ಮೆರವಣಿಗೆ ಶಿವರಾಂಪೇಟೆ ರಸ್ತೆ ಮಾರ್ಗ ಸಾಗಿ ರಾಜ್‍ಕಮಲ್ ಚಿತ್ರಮಂದಿರ ಬಳಿ ಬಲಕ್ಕೆ ತಿರುಗಿ ದೇವರಾಜ ರಸ್ತೆ ಮೂಲಕ ಮತ್ತೆ ನಂಜರಾಜ ಬಹದ್ದೂರ್ ಛತ್ರ ತಲುಪಿತು.
ಬಳಿಕ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಕಾನೂನಾತ್ಮಕವಾಗಿ ದೇಶದೆಲ್ಲೆಡೇ ಅನುಷ್ಠಾನಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ, ರಾಜ್ಯದ ಎಲ್ಲಾ ಭಾಗದಲ್ಲಿಯೂ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯಿದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಾ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿ, ಪ್ರತಿ ಭಟನೆಗೆ ಪ್ರಚೋದಿಸುತ್ತಿದೆ. ಮುಂದಿನ ದಿನಗಳಲ್ಲಿ ಮುಸ್ಲಿಂ ಬಾಂಧವರೇ ಪೌರತ್ವ ತಿದ್ದುಪಡಿ ಕಾಯಿದೆ ಪರವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಮೆರವಣಿಗೆಯಲ್ಲಿ ಬಿ.ಪಿ.ಮಂಜುನಾಥ್, ಗೋಕುಲ್ ಗೋವರ್ಧನ್, ಶಿವಕುಮಾರ್, ಚಿಕ್ಕ ವೆಂಕಟ್, ದೇವರಾಜು, ದಿನೇಶ್, ಕಿರಣ್‍ಗೌಡ, ರಾಜಕೀಯ ರವಿ ನಾರಾಯಣ್, ಸೋಮ ಸುಂದರ್, ನಿಶಾಂತ್, ಜೈಶಂಕರ್, ಮಹಿಳಾ ಮೋರ್ಚಾದ ಲೀಲಾ ಶೆಣೈ, ಆಶಾ, ರಾಣಿ, ಸವಿತಾ ಗೌಲಿ ಮತ್ತಿತರರು ಭಾಗವಹಿಸಿದ್ದರು.