ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡ ವಾಹನವೇ ನಾಪತ್ತೆ

ಮೈಸೂರು: ನಗರ ಪಾಲಿಕೆ ಆವರಣದಲ್ಲಿದ್ದ ವಾಹನವೊಂದು ಇದ್ದಕ್ಕಿದ್ದಂತೆ ನಾಪತ್ತೆ ಯಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರಪಾಲಿಕೆ ಅನುಮತಿ ಪಡೆಯದೆ ಅನಧಿಕೃತ ವಾಗಿ ವಿದ್ಯುತ್ ಕಂಬಗಳಿಗೆ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಸುತ್ತಿದ್ದ ಆರೋಪದಡಿ ಏ.30ರಂದು 4ನೇ ವಾರ್ಡ್‍ನಲ್ಲಿ ಕೇಬಲ್ ಸಹಿತ ವಶಪಡಿಸಿಕೊಳ್ಳ ಲಾಗಿದ್ದ ಜೀಪ್ ಮಾದರಿ ಬೊಲೆರೋ ವಾಹನ 3 ದಿನಗಳ ಹಿಂದೆ ನಾಪತ್ತೆಯಾಗಿದೆ. ವಲಯ ಕಚೇರಿ 5ರ ಸಹಾಯಕ ಆಯುಕ್ತ ಮಹೇಶ್, ಅಭಿವೃದ್ಧಿ ಅಧಿ ಕಾರಿ ವೀರೇಶ್ ಹಾಗೂ ಸಿಬ್ಬಂದಿ ವಶಪಡಿಸಿಕೊಂ ಡಿದ್ದ ವಾಹನವನ್ನು ನಗರ ಪಾಲಿಕೆ ಚುನಾವಣಾ ಶಾಖೆ ಸಮೀಪ ನಿಲ್ಲಿಸಿ, ಅದರ ಕೀಯನ್ನು ಕಂಟ್ರೋಲ್ ರೂಂಗೆ ನೀಡಿದ್ದರು. 20 ದಿನಗಳಿಂದ ಅಲ್ಲಿಯೇ ಇದ್ದ ವಾಹನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಕೀ ಕಂಟ್ರೋಲ್ ರೂಂನಲ್ಲೇ ಇದೆ.

ವಾಹನದ ಮಾಲೀಕರು ಅಥವಾ ಕೇಬಲ್ ಸಂಸ್ಥೆ ಯವರು ಮತ್ತೊಂದು ಕೀ ಬಳಸಿ ವಾಹನವನ್ನು ತೆಗೆದು ಕೊಂಡು ಹೋಗಿದ್ದಾರೋ?, ನಕಲಿ ಕೀ ಬಳಸಿ ಯಾರಾ ದರೂ ಕಳ್ಳತನ ಮಾಡಿದ್ದಾರೋ? ಅಥವಾ ಅಧಿಕಾರಿ ಗಳೇ ಬಿಟ್ಟು ಕಳುಹಿಸಿದ್ದಾರೋ? ಗೊತ್ತಿಲ್ಲ. ಈ ಬಗ್ಗೆ ವಾಹನವನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು, ಪಾಲಿಕೆ ಹೆಚ್ಚುವರಿ ಆಯುಕ್ತರು, ಸೂಪರಿಂಟೆಂಡೆಂಟ್ ಇಂಜಿನಿಯರ್, ವಾಹನ ವಿಭಾಗದ ಅಧಿಕಾರಿಗಳು ಸೇರಿದಂತೆ ಯಾವ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಕೀ ನಮ್ಮ ಬಳಿಯೇ ಇದೆ. ವಾಹನದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಕಂಟ್ರೋಲ್ ರೂಂ ಸಿಬ್ಬಂದಿ ಹೇಳಿ ದರೆ, ಯಾರೋ ಬಂದು ವಾಹನ ತೆಗೆದುಕೊಂಡು ಹೋದರೆಂದು ಅಲ್ಲಿನ ಭದ್ರತಾ ಸಿಬ್ಬಂದಿ ಹೇಳಿದ್ದಾರಂತೆ.

ವಿಷಯ ತಿಳಿಯುತ್ತಿದ್ದಂತೆ ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಷಫೀ ಅಹಮದ್, ಮಾಜಿ ಮೇಯರ್‍ಗಳಾದ ಅಯೂಬ್‍ಖಾನ್, ಆರಿಫ್ ಹುಸೇನ್ ಇನ್ನಿತರರು ಸೋಮವಾರ ಸಭೆ ಸೇರಿ ಚರ್ಚೆ ನಡೆಸಿದರು. ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾ ನಂದಮೂರ್ತಿ, ಎಸ್‍ಇ ಮಹೇಶ್, ವಲಯ ಕಚೇರಿ 5ರ ಸಹಾಯಕ ಆಯುಕ್ತ ಮಹೇಶ್, ಅಭಿವೃದ್ಧಿ ಅಧಿಕಾರಿ ವೀರೇಶ್ ಅವರನ್ನು ಕರೆದು ವಾಹನ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಕೇಳಿದರು. ನಾವು ವಶಕ್ಕೆ ಪಡೆದ ವಾಹನವನ್ನು ಪಾಲಿಕೆ ಆವರಣದಲ್ಲೇ ನಿಲ್ಲಿಸಿ, ಕಂಟ್ರೋಲ್ ರೂಂಗೆ ಕೀ ನೀಡಲಾಗಿತ್ತು. ವಶಕ್ಕೆ ಪಡೆದ ಮರುದಿನವೇ ಟೆಲಿಕಾಂ ಕಂಪನಿಯವರು ಬಂದು ನಾವು ಚೆಸ್ಕಾಂನಿಂದ ಅನುಮತಿ ಪಡೆದಿದ್ದು, ವಾಹನ ವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಅದನ್ನು ಆಯುಕ್ತರ ಗಮನಕ್ಕೆ ತರಲಾಗಿತ್ತು. ಈಗ ವಾಹ ನವೇ ಇಲ್ಲವೆಂದು ವಲಯ ಕಚೇರಿ 5ರ ಅಧಿಕಾರಿಗಳು ಹೇಳಿದರೆ, ಕೇಬಲ್ ಅನ್ನು ಸ್ಟೋರ್ ರೂಂ ಹಾಗೂ ವಾಹನವನ್ನು ವೆಹಿಕಲ್ ವಿಭಾಗದ ಅಧಿಕಾರಿಗಳಿಗೆ ವಹಿಸಬೇಕಿತ್ತು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡು ತ್ತಿರುವ ಕಂಟ್ರೋಲ್ ರೂಂ ಸಿಬ್ಬಂದಿ ಅಥವಾ ಸೆಕ್ಯೂರಿಟಿ ಗಳಿಗೆ ವಹಿಸಲು ಆಗುವುದಿಲ್ಲ. ವಾಹನ ಹೇಗೆ ನಾಪತ್ತೆ ಯಾಗಿದೆ ಎಂದು ಪರಿಶೀಲಿಸಬೇಕಿದೆ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತರು ಹಾಗೂ ಎಸ್‍ಇ ತಿಳಿಸಿದರು.

ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದ ಕಾರಣ ಗೊಂದಲ ಕ್ಕೀಡಾದ ಮೇಯರ್ ಅವರು, ವಾಹನ ಬಿಡುಗಡೆಗೆ ಕೋರಿ ಕೇಬಲ್ ಸಂಸ್ಥೆಯವರು ನೀಡಿದ್ದ ಮನವಿ ಸಹಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದಾಗ, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂಬ ಎಸ್‍ಇ ಅವರ ಟಿಪ್ಪಣಿಯ ಹೊರತು ಆಯುಕ್ತರ ಯಾವುದೇ ಸೂಚನೆ ದಾಖಲಾಗಿರಲಿಲ್ಲ. ಪಾಲಿಕೆ ಆವರಣದಲ್ಲಿರುವ ಸಿಸಿಟಿವಿ ಕ್ಯಾಮರಾಗಳ ಫುಟೇಜ್ ವೀಕ್ಷಿಸಿದರೆ ವಾಹನ ಹೇಗೆ? ನಾಪತ್ತೆಯಾಗಿದೆ ಎಂಬುದು ಗೊತ್ತಾಗುತ್ತದೆ. ಆದರೆ ಅದಕ್ಕೂ ಅಧಿಕಾರಿಗಳು ಆಸಕ್ತಿ ತೋರಿದಂತೆ ಕಾಣಲಿಲ್ಲ. ಪಾಲಿಕೆ ಆಯುಕ್ತರು ರಜೆಯಲ್ಲಿರುವ ಕಾರಣ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ ಹೇಳಿದರು. ಆದರೆ ಮೇಯರ್, ಮಾಜಿ ಮೇಯರ್‍ಗಳು ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದರು. ಕಡೆಗೆ ವಾಹನ ನಾಪತ್ತೆಯಾಗಿರುವ ಬಗ್ಗೆ ಪೊಲೀಸ ರಿಗೆ ದೂರು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಸಂಬಂಧ ಮಾತನಾಡಿದ ಮಾಜಿ ಮೇಯರ್ ಅಯೂಬ್‍ಖಾನ್, ಟೆಲಿಕಾಂ ಕೇಬಲ್ ಅಳವಡಿಕೆ ಒಂದು ಮಾಫಿಯಾದಂತೆ ಕಂಡು ಬರುತ್ತಿದೆ. ಈ ಹಿಂದೆಯೇ ಸದಸ್ಯರಾಗಿದ್ದ ನಂದೀಶ್‍ಪ್ರೀತಂ ದೊಡ್ಡ ಗಲಾಟೆಯನ್ನೇ ಮಾಡಿದ್ದರು. ವಿವಿಧ ಖಾಸಗಿ ಟೆಲಿಕಾಂ ಸಂಸ್ಥೆಗಳಿಂದ ಬರಬೇಕಿರುವ ಸುಮಾರು 70 ಕೋಟಿ ರೂ. ವಸೂಲಿ ಮಾಡುವಂತೆ ಕೌನ್ಸಿಲ್‍ನಲ್ಲಿ ತೀರ್ಮಾ ನಿಸಲಾಗಿತ್ತು. 3 ತಿಂಗಳ ಹಿಂದೆ ಮತ್ತೆ ಅನುಮತಿಗೆ ಅರ್ಜಿ ಸಲ್ಲಿಸಿದ್ದಾಗ ಬಾಕಿ ಹಣ ಕಟ್ಟುವಂತೆ ತಾಕೀತು ಮಾಡಲಾಗಿತ್ತು. ಆದರೆ ಪಾಲಿಕೆಗೆ ಹಣ ಕಟ್ಟುವುದರ ಬದಲು ಚೆಸ್ಕಾಂ ಅಧಿಕಾರಿಗಳ ಅನುಮತಿ ಪಡೆದು ವಿದ್ಯುತ್ ಕಂಬಗಳಲ್ಲಿ ಅಳವಡಿಸುತ್ತಿದ್ದಾರೆ. ಫುಟ್‍ಪಾತ್ ಪಾಲಿಕೆಗೆ ಸೇರಿದ್ದು ಎಂಬುದನ್ನು ಮರೆತು ಮನಸ್ಸೋ ಇಚ್ಛೆ ಕೇಬಲ್ ಹಾಕುತ್ತಿದ್ದಾರೆ. ನಗರದ ಸೌಂದರ್ಯ ಹಾಳಾಗುವುದಲ್ಲದೆ, ಅವಘಡ, ಅನಾಹುತಕ್ಕೂ ಆಸ್ಪದ ವಾಗುತ್ತಿದೆ. ಪದೇ ಪದೆ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಆರಿಫ್ ಹುಸೇನ್ ಮಾತನಾಡಿ, ವಿದ್ಯುತ್ ಕಂಬ ನೆಡುವುದಕ್ಕೂ ಪಾಲಿಕೆ ಅನುಮತಿ ಪಡೆಯ ಬೇಕು. ಚೆಸ್ಕಾಂ ಅನುಮತಿ ಪಡೆದು ಕಂಬದಲ್ಲಿ ಕೇಬಲ್ ಅಳವಡಿಸಲು ಅವಕಾಶವಿಲ್ಲ. ಫುಟ್‍ಪಾತ್ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ಕೋಟ್ಯಾಂತರ ರೂ. ಹಣ ಖರ್ಚು ಮಾಡಲಾಗಿದೆ. ಆದರೆ ಕೇಬಲ್‍ನಿಂದ ಎಲ್ಲವನ್ನೂ ಹಾಳು ಮಾಡಲಾಗುತ್ತಿದೆ ಎಂದರು.