ಅರಸೀಕೆರೆ: ಜಮೀನು ಖಾತೆ ಮಾಡಿಸುವ ವಿಚಾರದಲ್ಲಿ ಸಂಬಂಧಿಕ ನಿಂದಲೇ ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ಅಂಗೈ ಯಲ್ಲೇ ಸಾವಿಗೆ ಕಾರಣ ಬರೆದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗಂಡಸಿ ಹೋಬಳಿಯ ಜೀಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಿದ್ದಮಲ್ಲಯ್ಯ ಅವರ ಪತ್ನಿ ವೀಣಾ (37) ಅವರು ತಮ್ಮ ಸಂಬಂಧಿಕ ಲೋಕೇಶ್ ನಿಂದ ವಂಚನೆಯಾಗಿದೆ ಎಂದು ಕೈಮೇಲೆ ತನ್ನ ಆತ್ಮಹತ್ಯೆಗೆ ಕಾರಣ ಬರೆದುಕೊಂಡು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖ ಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ಸಿದ್ದಮಲ್ಲಯ್ಯ ಅವರು ಗ್ರಾಮದ ಸರ್ವೇ ನಂ. 23/3, 22/2ಎ, 68/4ಬಿ ಮತ್ತು 22/2ಬಿರಲ್ಲಿನ ಪಿತ್ರಾರ್ಜಿತ ಜಮೀನಿನ ಸ್ವಾಧೀನದಲ್ಲಿದ್ದು, ಅದನ್ನು ಅವರ ಅಣ್ಣನ ಮಗ ಲೋಕೇಶ ಖಾತೆ ಮಾಡಿಸುತ್ತೇನೆ ಎಂದು ನಂಬಿಸಿ ಎಲ್ಲಾ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ. ಇದನ್ನು ಕೇಳಲು ಹೋದ ಸಿದ್ದಮಲ್ಲಯ್ಯ ಹಾಗೂ ವೀಣಾ ಅವರ ಮೇಲೆ ದೌರ್ಜನ್ಯವೆಸಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನ ಲಾಗಿದೆ. ಇದರಿಂದ ಮನನೊಂದು ವೀಣಾ, ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ತಮ್ಮ ಎಡಕೈ ಮೇಲೆ ‘ನನ್ನ ಸಾವಿಗೆ ಲೋಕೇಶನೇ ಕಾರಣ’ ಎಂದು ಬರೆದುಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿದ್ದಮಲ್ಲಯ್ಯ ಅವರು ನೀಡಿದ ದೂರಿನ ಮೇರೆಗೆ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.