ದೇಶ ಒಡೆದ ಜಿನ್ನಾ ಬೆಂಬಲಿಗರಿಗೂ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಜಾಮದಾರ್ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ…

ಮೈಸೂರು: ಅಧಿಕಾರಕ್ಕಾಗಿ ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾ ಬೆಂಬಲಿಗರಿಗೂ, ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಹೋರಾಟ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಬೆಂಬಲಿಗರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ವಿಶೇಷಾಧಿಕಾರಿ ಪ್ರೊ. ರವೀಂದ್ರ ರೇಷ್ಮೆ ಕಿಡಿಕಾರಿದರು.

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ `ಪ್ರಚಲಿತ ವೀರಶೈವ-ಲಿಂಗಾಯತ ಸಮಾಜದ ಸಾಮಾಜಿಕ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

2ನೇ ಮಹಾಯುದ್ಧದ ನಂತರ ಲಂಡನ್‍ನಲ್ಲಿ ತೀವ್ರ ಆರ್ಥಿಕ ಕುಸಿತ ಉಂಟಾಯಿತು. ಅಖಂಡ ಹಿಂದೂಸ್ತಾನದಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿತು. ಈ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗಾಂಧೀಜಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರು. ಇದನ್ನು ಅರಿತ ಮಹಮ್ಮದ್ ಅಲಿ ಜಿನ್ನಾ, ಪರಿಸ್ಥಿತಿ ಹೀಗೆ ಮುಂದುವರೆದರೆ, ಸ್ವತಂತ್ರ ಭಾರತದಲ್ಲಿ ಮುಸ್ಲಿಂರಿಗೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಪ್ರತ್ಯೇಕ ರಾಷ್ಟ್ರಕ್ಕೆ ಚಾಲನೆ ನೀಡಿದರು.

ಕರ್ನಾಟಕದ 2018ರ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಮತದಾರರನ್ನು ವಿಭಜನೆ ಮಾಡಿದರೆ, ನಿಚ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ದೂರಾಲೋಚನೆ ಮಾಡಿದ ಅಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಬಹಳ ಉತ್ಸಾಹದಲ್ಲಿ ವೀರಶೈವ-ಲಿಂಗಾಯತ ಧರ್ಮ ವಿಭಜನೆಗೆ ಚಾಲನೆ ನೀಡಿದರು. ನಂತರ ನಡೆದ ಚುನಾವಣೆ ಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸೋತು ಸುಣ್ಣ ವಾಯಿತು. ಅಧಿಕಾರಕ್ಕಾಗಿ ಹಿಂಬಾಗಿಲ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು ಎಂದರು.

ಸ್ವಾತಂತ್ರ್ಯ ಪೂರ್ವದ ಹಿಂದೂಸ್ತಾನದಲ್ಲಿ 524 ಸಂಸ್ಥಾನ ಗಳಿದ್ದವು. ಇಷ್ಟು ಸಂಸ್ಥಾನಗಳಿಗೂ ಪ್ರತ್ಯೇಕ ಬಾವುಟಗಳಿದ್ದವು. ಇದನ್ನು ಒಟ್ಟು ಮಾಡಿ, ತ್ರಿವರ್ಣ ಧ್ವಜದಡಿ ತರಲು ನಮ್ಮ ಹಿರಿ ಯರು ಸಾಕಷ್ಟು ಹೋರಾಟ ಮಾಡಿದ್ದಾರೆ. ಒಂದೇ ಬಾವುಟದಡಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಬದುಕುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕನ್ನಡದ ಹೆಸರಿನಲ್ಲಿ ಪ್ರತ್ಯೇಕ ಧ್ವಜ ಹಾರಾಟಕ್ಕೆ ಚಾಲನೆ ನೀಡಿದರು. ಇದಕ್ಕೆ ಸ್ವಯಂ ಘೋಷಿತ ಬುದ್ಧಿಜೀವಿಗಳೂ ಬೆಂಬಲ ವ್ಯಕ್ತಪಡಿಸಿದ್ದು ನನಗೆ ಆಶ್ಚರ್ಯ ತಂದಿತು ಎಂದರು.

ಎಲ್ಲಾ ಮುಗಿದು ಈ ವಿವಾದ ತಣ್ಣಗಾಗುವ ಮೊದಲೇ ಇಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಮೇಲಿನ ಆಡಳಿತ ವಿರೋಧಿ ಅಲೆ ತಗ್ಗಿಸಲು ಪ್ರಯೋಗಿಸಿದ್ದು, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು. ಇದರ ಕಿಚ್ಚಿಗೆ ಹೆದರಿದ ಅವರು, ಅದನ್ನು ತಣ್ಣಗಾಗಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದರು. ಇಂತಹ ಕ್ಷುಲ್ಲಕ ರಾಜಕಾರಣದ ನಡುವೆ ಕಳೆದ 25 ವರ್ಷಗಳಿಂದ ಲಿಂಗಾಯತ ಸಮುದಾಯದಲ್ಲಿ ಒಳ್ಳೆಯ ನಾಯಕತ್ವ ರೂಪಿಸುವಲ್ಲಿ ವಿಫಲರಾಗಿರುವ ಅಂಶವನ್ನು ಪ್ರತಿ ಚುನಾವಣೆಯಲ್ಲಿ ಪದೇ ಪದೆ ಜ್ಞಾಪಿಸುತ್ತಿದ್ದರೂ ಈ ನಿಟ್ಟಿನಲ್ಲಿ ಯಾರು ಯೋಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಪ್ರಬಲ ಎನ್ನುವುದು ಖಚಿತ. ಪ್ರತಿ ಚುನಾವಣೆಯಲ್ಲಿ ಈ ಸಮುದಾಯದವರು 40ರಿಂದ 50 ಮಂದಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಆದರೆ, ಇವರಲ್ಲಿ ಎಷ್ಟು ಮಂದಿ ಶುದ್ಧಶೀಲ ನಾಯಕತ್ವ ಗುಣ ಹೊಂದಿ ದ್ದಾರೆ ಎಂಬುದು ಮೊದಲು ವಿಮರ್ಶೆಯಾಗಬೇಕು ಎಂದರು.

ಮಾಜಿ ಪ್ರಧಾನ ಮಂತ್ರಿ ಡಾ.ಮನ್‍ಮೋಹನ್ ಸಿಂಗ್ ಅವರ ಆರ್ಥಿಕ ನೀತಿ ದೇಶದಲ್ಲಿ ಅಳವಡಿಕೆಯಾಗಿ 28 ವರ್ಷ ಕಳೆದಿದೆ. ಇದರ ಬೆಳವಣಿಗೆ ಅತೀ ವೇಗದಲ್ಲಿ ಸಾಗುತ್ತಿದೆ. ಆದರೆ, ಇದರ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ಆದರೆ, ಪ್ರಧಾನಿ ಮೋದಿಯವರ ಭಾಷಣ-ಮನಮೋಹನ್‍ಸಿಂಗ್‍ರ ಮೌನದ ಬಗ್ಗೆ ಚರ್ಚೆ ಯಾಗುತ್ತಿವೆ. ಇದರಲ್ಲಿ ಯಾರು ಶ್ರೇಷ್ಠ ಎಂಬುದನ್ನು ಮತದಾರರ ವಿವೇಚನೆಗೆ ಬಿಡುತ್ತೇನೆ.