ಮೈಸೂರು: ಇಂದು ಬೆಳಿಗ್ಗೆ ಹುಣಸೂರು ರಸ್ತೆಯಲ್ಲಿ ಸಾಗುವಾಗ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಫುಟ್ಪಾತಿನಲ್ಲಿ ಇರಿಯುವ ಬಿಸಿಲನ್ನೂ ಲೆಕ್ಕಿಸದೆ ಜೇನು ಹಿಂಡಿ ಹೊಟ್ಟೆ ತುಂಬಿಸಿಕೊಳ್ಳಲು ‘ಸಿಗಬಹುದಾದ ಪುಡಿಗಾಸಿಗಾಗಿ ಗ್ರಾಹಕರನ್ನು ಎದುರು ನೋಡುತ್ತಾ ಕುಳಿತಿದ್ದ ತಾಯಿ-ಮಗನ ದೃಶ್ಯ ಕಂಡು ಮನಸು ಮಮ್ಮಲ ಮರುಗಿತು.
ಇವರು ಯಾವ ಊರಿನವರೋ? ಯಾವ ಭಾಷಿಕರೋ? ತಿಳಿಯದು. ಆದರೆ ಇವರು ಭಾರತೀಯರು. ಈ ರೀತಿ ಬೀದಿ ಬದಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುವ ಕಾಯಕದಲ್ಲಿ ತೊಡಗಿರುವ ಅನೇಕ ಅಲೆಮಾರಿ ಕುಟುಂಬಗಳು ಮೈಸೂರಿ ನಲ್ಲಿವೆ. ಇವರಿಗೆ ಮುದ್ರಾ ಯೋಜನೆಯ ಅರಿವಾಗಲಿ, ಬಿಪಿಎಲ್ ಕಾರ್ಡಿನ ಸವಲತ್ತಾಗಲಿ, ಮಳೆ, ಚಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಸೂರಾಗಲಿ ಇದ್ದಂತಿಲ್ಲ.
ಭಾರತ ದೇಶದಲ್ಲಿ ಅಮೂಲ್ಯ ಮಾನವ ಸಂಪನ್ಮೂಲದ ಸದ್ಬಳಕೆಯಾಗದೇ ಇರುವ ಪರಿಯನ್ನು ಈ ದೃಶ್ಯದಿಂದಲೇ ನಾವು ಅರ್ಥೈಸಿಕೊಳ್ಳಬಹುದಾಗಿದೆ. ಚೀನಾ ದೇಶವನ್ನು ಹಿಂದಿಕ್ಕಲು ನಮಗೇಕೆ ಸಾಧ್ಯವಾಗುತ್ತಿಲ್ಲ ಎಂಬುದರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಈ ಫೆÇೀಟೋದಲ್ಲಿನ ತಾಯಿಗೆ, ತನ್ನ ಮಗನ ಹೊಟ್ಟೆ ತುಂಬಿ ಸುವುದೇ ಸವಾಲಾಗಿರುವಾಗ ಅವನ ಭವಿಷ್ಯ ರೂಪಿಸುವ ಕನಸು ಕಾಣಲು ಹೇಗೆ ಸಾಧ್ಯ? ಬಾಲಕಾರ್ಮಿಕ ಕಾಯ್ದೆ, ಶಿಕ್ಷಣದ ಹಕ್ಕಿನ ಬಗ್ಗೆ ಬೊಬ್ಬೆ ಹೊಡೆಯುವ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಇಂತಹ ಬೀದಿ ಬದಿಯ ಅಲೆಮಾರಿ ವ್ಯಾಪಾರಿಗಳ ಮಕ್ಕಳ ಶಿಕ್ಷಣ, ಹಾಗೂ ಭವಿಷ್ಯದ ಬಗ್ಗೆ ಚಿಂತಿಸಿದ್ದಾರೆ ಎಂದು ನನಗನಿಸುವುದಿಲ್ಲ. ಹೆಸರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೆ. ಈ ಇಲಾಖೆಯ ಸಚಿವೆ ಯಾಗುವವರು ಅಲಂಕಾರಕ್ಕಷ್ಟೇ ಮೀಸಲು ಎಂಬಂತಾಗಿರುವಾಗ ಈ ಮಹಿಳೆ ಮತ್ತು ಮಗುವಿನ ಕುರಿತು ಯೋಚಿಸಲು ಸಮಯವಾದರೂ ಪಾಪ ಅವರಿ ಗೆಲ್ಲಿದೆ? ಸಂವಿಧಾನ, ಪ್ರಜಾಪ್ರಭುತ್ವ, ಸಮಾಜಿಕ ನ್ಯಾಯ ಎಂಬ ಪದಗಳೆಲ್ಲ ಇಂಥವರ ಕಿವಿಗೆ ಬೀಳುವುದೇ ಇಲ್ಲ, ಅಪ್ಪಿತಪ್ಪಿ ಬಿದ್ದರೂ ಅದು ಇವರಿಗೆ ಅರ್ಥವಾಗುವುದೂ ಇಲ್ಲ.
-ಆರ್.ರಘು, ಹವ್ಯಾಸಿ ಪತ್ರಕರ್ತ