ಈ ಬಾರಿಯೂ ದಸರೆಗೆ 12 ಆನೆ ಆಯ್ಕೆಗೆ ಅರಣ್ಯ ಇಲಾಖೆ ನಿರ್ಧಾರ

ಮೈಸೂರು,ಜು.15(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ `ಗಜಪಡೆ’ ಸಿದ್ಧಪಡಿಸಲು ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಈ ತಿಂಗಳ 2ನೇ ವಾರದಲ್ಲಿ ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಲಿದೆ.

ಜಂಬೂ ಸವಾರಿಗೂ 2 ತಿಂಗಳು ಮುನ್ನವೇ ದಸರಾ ಆನೆ ಗಳನ್ನು ವಿವಿಧ ಶಿಬಿರಗಳಿಂದ ಮೈಸೂರಿಗೆ ಕರೆತರುವ ಸಂಪ್ರದಾಯವಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸ ಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರ ನಂತರ ಮೊದಲ ತಂಡದಲ್ಲಿ ಆರು ಆನೆಗಳನ್ನು ಅರಮನೆ ಅಂಗಳಕ್ಕೆ ಕರೆತರ ಬೇಕಾಗಿರುವುದರಿಂದ ಆನೆಗಳನ್ನು ಆಯ್ಕೆ ಮಾಡಲು ಇಲಾಖೆ ಸಿದ್ಧತೆ ನಡೆಸುತ್ತಿದೆ. ಜುಲೈ ಎರಡನೇ ವಾರದಲ್ಲಿ ಮೈಸೂರು ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್  ಹಾಗೂ ಪಶುವೈದ್ಯ ಡಾ.ಡಿ.ಎನ್.ನಾಗ ರಾಜು ನೇತೃತ್ವದ ತಂಡ ಆನೆಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಿದೆ.

ಈ ಕುರಿತಂತೆ ಡಿಸಿಎಫ್ ಡಾ.ಕೆ.ಸಿ. ಪ್ರಶಾಂತ್‍ಕುಮಾರ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ದಸರಾ ಮಹೋತ್ಸವದ ಗಜಪಡೆ ಆಯ್ಕೆಗೆ ಸಂಬಂ ಧಿಸಿದಂತೆ ಹಿರಿಯ ಅಧಿ ಕಾರಿಗಳ ಸೂಚನೆ ಮೇರೆಗೆ ಮುಂದಿನ ವಾರ ಆನೆಗಳ ಕ್ಯಾಂಪ್‍ಗಳಿಗೆ ತೆರಳಿ ಪರಿಶೀಲಿಸುತ್ತೇವೆ. 12 ಆನೆಗಳನ್ನು ಈ ಬಾರಿಯೂ ಆಯ್ಕೆ ಮಾಡಬೇಕೆಂಬ ಉದ್ದೇಶವಿದೆ. ಕ್ಯಾಂಪ್‍ಗಳಲ್ಲಿರುವ ಆನೆಗಳ ಆರೋಗ್ಯ ಸ್ಥಿತಿ, ಮದ ಬಂದಿದೆಯಾ? ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಮಥ್ರ್ಯ ಇದೆಯಾ? ಹಾಗೂ ಇನ್ನಿತರ ಅಂಶಗಳ ಆಧಾರದ ಮೇಲೆ ಆನೆಗಳ ಸ್ಥಿತಿಗತಿಯನ್ನು ಅವಲೋಕಿಸಿ ಪಟ್ಟಿ ತಯಾರಿಸಲಾಗುತ್ತದೆ. ಆ ನಂತರ ಸಭೆ ನಡೆಸಿ 12 ಆನೆಗಳ ಪಟ್ಟಿ ತಯಾರಿಸಲಾಗುತ್ತದೆ. ಅದರಲ್ಲಿ ಜಂಬೂ ಸವಾರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುವ ಆರು ಆನೆಗಳನ್ನು  ಮೊದಲ ತಂಡದಲ್ಲಿ ಕರೆತರಲು ನಿರ್ಧರಿಸಲಾಗುತ್ತದೆ. ಯಾವ ಯಾವ ಆನೆಗಳನ್ನು ಕರೆತರುವುದಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ತಂಡ ಆನೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಯಾವ ಯಾವ ಆನೆಯನ್ನು ಕರೆತರಬಹು ದೆಂದು ಹೇಳಬಹುದು ಎಂದು ವಿವರಿಸಿದರು.