ಅರ್ಥಪೂರ್ಣ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನ

ಹಾಸನ:  ನಾಡಪ್ರಭು ಕೆಂಪೇಗೌಡ ಜಯಂತಿ ಯನ್ನು ಜೂ. 27ರಂದು ನಗರದ ಹಾಸನಾಂಬ ಕಲಾ ಮಂದಿರ ದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಅವರ ಅಧ್ಯಕ್ಷತೆ ಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕುರಿತು ಪೂರ್ವ ಸಿದ್ದತಾ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಮಾತನಾಡಿ, ಜಯಂತಿ ಕುರಿತು ನಗರದಲ್ಲಿ ವ್ಯಾಪಕ ಪ್ರಚಾರ ಮಾಡಿಸಲು ಕ್ರಮವಹಿಸುವಂತೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ಸೂಚಿಸಿದರು. ನಾಡಪ್ರಭು ಕೆಂಪೇಗೌಡ ಅವರು ಮಾಡಿರುವ ಮಹತ್ವದ ಕೆಲಸಗಳ ಕುರಿತು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಕೆಂಪೇಗೌಡರ ವಿಷಯ ಕುರಿತು ಕಿರು ಹೊತ್ತಿಗೆಯನ್ನು ಮುದ್ರಿಸಿ ವಿತರಿಸಬೇಕು ಎಂದು ತಿಳಿಸಿದರು. ಕಾರ್ಯ ಕ್ರಮದಲ್ಲಿ ಕೆಂಪೇಗೌಡರನ್ನು ಕುರಿತು ಉಪನ್ಯಾಸ ನೀಡಲು ಪ್ರಧಾನ ಭಾಷಣಕಾರರನ್ನು ಆಹ್ವಾನಿಸಲು ಹಾಗೂ ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಜನ ಪ್ರತಿನಿಧಿಗಳನ್ನು ಹಾಗೂ ಮತ್ತಿತರರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಯಂತಿ ದಿನದಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾಧಿ ಕಾರಿ ಅವರ ಕಚೇರಿ ಆವರಣದಿಂದ ಮೆರವಣಿಗೆ ಹೊರಡ ಲಿದ್ದು ಅಗತ್ಯ ಸಿದ್ದತೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು. ಶಾಸಕ ಪ್ರೀತಂ.ಜೆ.ಗೌಡ ಮಾತನಾಡಿ, ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರಲು ಹಾಸನ ನಗರ ಸೇರಿದಂತೆ ಕಸಬಾದಲ್ಲಿಯೂ ಆಟೋ ಪ್ರಚಾರ ಮಾಡ ಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.