ಮೈಸೂರು ದೇಶದ ಪ್ರಥಮ ಸ್ವಚ್ಛ ನಗರವಾಗಿ ಹೊರಹೊಮ್ಮಲು ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರ ಸಕಾರಾತ್ಮಕ ಪ್ರತಿಕ್ರಿಯೆ ಮುಖ್ಯ

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅಭಿಮತ
ಮೈಸೂರು, ಜ.19(ಪಿಎಂ)- ಸ್ವಚ್ಛ ಸರ್ವೇಕ್ಷಣ ದಲ್ಲಿ ಮೈಸೂರು ದೇಶದ ಮೊದಲ ಸ್ವಚ್ಛ ನಗರ ವಾಗಿ ಹೊರಹೊಮ್ಮಲು ನಾಗರಿಕರ ಸಕಾರಾತ್ಮಕ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ `ಲೆಟ್ಸ್ ಡು ಇಟ್ ಮೈಸೂರು’ ಸ್ವಯಂ ಸೇವಾ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಸ್ವಚ್ಛ ಸರ್ವೇ ಕ್ಷಣ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿ ಸುವ ಸ್ವಯಂ ಸೇವಕರಿಗಾಗಿ ಭಾನುವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವಯಂ ಸೇವಕರಾದ ನೀವೇ ನಮ್ಮ ನಿಜವಾದ ರಾಯಭಾರಿಗಳು. ಸಾರ್ವಜನಿಕ ಸ್ಥಳಗಳಲ್ಲಿ ನೀವು ಸ್ವಚ್ಛ ಸರ್ವೇಕ್ಷಣ ಹಿನ್ನೆಲೆಯಲ್ಲಿ ನಾಗರಿಕರಿಗೆ ಅರಿವು ಮೂಡಿಸುವಾಗ ಮೊದಲು ಅವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ, ಅಂತಿಮವಾಗಿ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದರಿಂದ ಆಗುವ ಅನುಕೂಲ ಗಳ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು.

ನಾಗರಿಕರು ತಮ್ಮ ಮನೆಗಳಿಂದಲೇ ಹಸಿಕಸ ಹಾಗೂ ಒಣಕಸ ವಿಂಗಡಿಸಿ ನೀಡಿದರೆ ಅದನ್ನು ನಿರ್ವಹಿಸುವಲ್ಲಿ ಪಾಲಿಕೆಗೆ ಅನುಕೂಲವಾಗಲಿದೆ. ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಜೊತೆಗೆ ಪ್ಲಾಸ್ಟಿಕ್ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸ ಬೇಕು. ನಮ್ಮ ಹಿರಿಯರ ಕಾಲದಲ್ಲಿ ಈ ಪ್ಲಾಸ್ಟಿಕ್ ಬಳಕೆ ಇರಲಿಲ್ಲ. ನಾವು ಮನಸ್ಸು ಮಾಡಿದರೆ ಪ್ಲಾಸ್ಟಿಕ್ ಬಳಕೆ ತಪ್ಪಿಸಬಹುದು. ಇದು ನಾಗರಿಕರ ಮನಸಿಗೆ ಬರಬೇಕಿದೆ ಎಂದರು.

ಮೈಸೂರು ನಗರ ಬಯಲು ಶೌಚ ಮುಕ್ತ ಎಂದು ಗುರುತಿಸಲ್ಪಟ್ಟಿದೆ. ಜೊತೆಗೆ 5 ಸ್ಟಾರ್ ರ್ಯಾಂಕಿಂಗ್ ಸಹ ಹೊಂದಿದೆ. ಈ ಮಾಹಿತಿಗಳನ್ನು ಸಾರ್ವ ಜನಿಕರಿಗೆ ನೀಡಿದರೆ ಇದರಿಂದ ಅವರಲ್ಲಿ ಒಂದು ಹೆಮ್ಮೆಯ ಭಾವ ಉಂಟಾಗಲಿದೆ. ಈ ಅಂಶಗಳನ್ನು ತಿಳಿಸಿ ಕೊನೆಗೆ ಓಟ್ ಮಾಡಿ ಸಕಾರಾತ್ಮಕ ಪ್ರತಿ ಕ್ರಿಯೆ ನೀಡಲು ಮನವಿ ಮಾಡಿ. ಸ್ವಚ್ಛ ಸರ್ವೇ ಕ್ಷಣ ಹಿನ್ನೆಲೆಯಲ್ಲಿ ಈಗಾಗಲೇ ಪರಿಶೀಲನೆಗೆ ತಂಡ ಭೇಟಿ ನೀಡಿ ನಗರದಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಿದೆ ಎಂದು ತಿಳಿಸಿದರು.

ನಾಳೆಯಿಂದ 10 ದಿನಗಳ ಕಾಲ ನಿಮ್ಮ ಬಿಡು ವಿನ ವೇಳೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಲು ಸಾರ್ವಜನಿಕರಿಗೆ ಮಾಹಿತಿ ನೀಡಿ. ಇದರಿಂದ ನಿಮಗೂ ಉತ್ತಮ ಅನುಭವ ಆಗಲಿದ್ದು, ನಿಮ್ಮ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗಲಿದೆ. ಮನಸ್ಸು ಮಾಡಿದರೆ ಒಬ್ಬರು ಒಂದು ಸಾವಿರ ಓಟ್ ಮಾಡಿ ಸಲು ಸಾಧ್ಯವಿದೆ ಎಂದು ಹುರಿದುಂಬಿಸಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, 2014ರ ಅ.2ರ ಗಾಂಧಿ ಜಯಂತಿ ಯಂದು ಸ್ವಚ್ಛ ಸರ್ವೇಕ್ಷಣಗೆ ಚಾಲನೆ ದೊರೆಯಿತು. ಪ್ರಸ್ತುತ 4,441 ನಗರಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ. ಕಳೆದ ವರ್ಷ ಸಕಾರಾತ್ಮಕ ಪ್ರತಿಕ್ರಿಯೆಯಲ್ಲಿ ಹಿನ್ನಡೆ ಉಂಟಾದ ಹಿನ್ನಲೆಯಲ್ಲಿ ಮೈಸೂರು 3ನೇ ಸ್ಥಾನಕ್ಕೆ ಕುಸಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಸುಮಾರು 450 ಟನ್ ತ್ಯಾಜ್ಯದಲ್ಲಿ ಸುಮಾರು 280 ಟನ್ ಹಸಿಕಸ ಶೇಖರಣೆ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು 35 ಟನ್ ಅನ್ನು ಪ್ರತಿದಿನ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಹಸಿಕಸ ಮನೆಯಿಂದ ಬೇರ್ಪಡಿಸಿ ನೀಡಿದರೆ ಈ ಕಾರ್ಯ ಇನ್ನೂ ಉತ್ತಮ ವಾಗಿ ಸಾಗಲಿದೆ ಎಂದು ಮಾಹಿತಿ ನೀಡಿದರು.

ಸ್ವಚ್ಛ ಸರ್ವೇಕ್ಷಣ ತಂಡ ಮೈಸೂರು ನಗರವನ್ನು 4 ವಿಭಾಗಗಳಾಗಿ ವಿಂಗಡಿಸಿ ಸಮೀಕ್ಷಾ ಕಾರ್ಯ ಆರಂಭಿಸಿದೆ. ಪ್ರತಿ ವಿಭಾಗದಲ್ಲೂ ಒಂದು ಸಾರ್ವ ಜನಿಕ ಶೌಚಾಲಯವನ್ನು ಕಡ್ಡಾಯವಾಗಿ ಪರಿಶೀ ಲನೆ ನಡೆಸಲಿದೆ. ಒಟ್ಟು 6 ಸಾವಿರ ಅಂಕಗಳಿದ್ದು, ಈ ಪೈಕಿ 1,500 ಅಂಕಗಳು ನಾಗರಿಕರ ಸಕಾರಾ ತ್ಮಕ ಪ್ರತಿಕ್ರಿಯೆಗೆ ಮೀಸಲಾಗಿವೆ ಎಂದರು.

`ಲೆಟ್ಸ್ ಡು ಇಟ್ ಮೈಸೂರು’ ಅಧ್ಯಕ್ಷ ಬಿ.ಎಸ್. ಪ್ರಶಾಂತ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಮ್ಮ ಸಂಸ್ಥೆ ಮೂಲಕ ಈಗಾಗಲೇ 400ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಾಗಿ ನೋಂದಣಿ ಮಾಡಿ ಕೊಂಡಿದ್ದಾರೆ. ಇದರಲ್ಲಿ 200 ಮಂದಿ ಗುಂಪನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ತಯಾರಿ ಮಾಡಲಾಗುವುದು. ಇವರಿಗೆ ಅಗತ್ಯವಿ ರುವ ಭತ್ಯೆಗಳನ್ನು ನಮ್ಮ ಸಂಸ್ಥೆ ಮೂಲಕ ನೀಡ ಲಾಗುವುದು ಎಂದು ತಿಳಿಸಿದರು.

ಸ್ವಚ್ಛ ಸರ್ವೇಕ್ಷಣದಲ್ಲಿ 3 ವಿಧಾನದಲ್ಲಿ ನಾಗರಿಕರು ಪ್ರತಿಕ್ರಿಯೆ ನೀಡಬಹುದು…
3 ವಿಧಾನಗಳ ಮೂಲಕ ಪ್ರತಿಕ್ರಿಯೆ ನೀಡಲು ಅವಕಾಶವಿದೆ. ಈ ಪೈಕಿ `1969’ಕ್ಕೆ ಮಿಸ್ಡ್ ಕಾಲ್ ಮಾಡಿ ಪ್ರತಿಕ್ರಿಯೆ ನೀಡುವುದೂ ಒಂದಾಗಿದೆ. ಆದರೆ ಇತ್ತೀಚೆಗೆ ಈ ಪ್ರಕ್ರಿಯೆಗೆ ತಾಂತ್ರಿಕ ದೋಷ ಅಡಚಣೆ ಉಂಟು ಮಾಡುತ್ತಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪಾಲಿಕೆಯಿಂದ ದೂರು ನೀಡಲಾಗಿದೆ. ಮತ್ತೊಂದು ವಿಧಾನವೆಂದರೆ `https://swachhsurvekshan2020.org/CitizenFeedback’ ವೆಬ್‍ಸೈಟ್‍ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಓಟಿಂಗ್ (ಪ್ರತಿಕ್ರಿಯೆ ನೀಡುವುದು) ಮಾಡಬಹುದು. ಅಂತಿಮವಾಗಿ `ಓಟ್ ಫಾರ್ ಮೈ ಸಿಟಿ’ ಆಪ್ಯ್ ಮೂಲಕ ಓಟ್ ಮಾಡಬಹುದು. -ಡಾ.ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ.