ಇಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯಿಂದ ಸುಮಾರು 6 ಸಾವಿರ ಕಾರ್ಯಕರ್ತರು ಭಾಗಿ: ಮಲ್ಲಿಕಾರ್ಜುನಪ್ಪ

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ (ಏ.9) ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ಆಗಮಿಸಿ ನಗರದ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋ ಜಿಸಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊ ಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 6 ಸಾವಿರ ಕಾರ್ಯಕರ್ತರು ತೆರಳುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18ರಂದು ನಡೆಯುವ ಲೋಕ ಸಭಾ ಚುನಾವಣೆ ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರು ನಾಳೆ(ಏ.9) ಮೈಸೂರಿಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಉಸ್ತುವಾರಿ ಮುರಳೀಧರ್ ರಾವ್, ಸಹ ಉಸ್ತುವಾರಿ ಕಿರಣ್ ಮಹೇಶ್ವರಿ ಸೇರಿದಂತೆ ಇನ್ನಿತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಏ.11ರಂದು ನಗರಕ್ಕೆ ಬಿಎಸ್‍ವೈ: ಚುನಾ ವಣಾ ಪ್ರಚಾರಕ್ಕಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇದೇ ತಿಂಗಳ 11ರಂದು ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ. ಸ್ಥಳ ಮತ್ತು ಸಮಯ ಇನ್ನೂ ನಿಗದಿ ಯಾಗಿಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಇನ್ಯಾವ ಸ್ಟಾರ್ ಪ್ರಚಾರಕರೂ ಜಿಲ್ಲೆಗೆ ಆಗಮಿ ಸುವುದಿಲ್ಲ ಎಂದು ಮಲ್ಲಿಕಾರ್ಜುನಪ್ಪ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಒಂದೂವರೆ ಲಕ್ಷ ಅಂತರದಿಂದ ಗೆಲುವು: ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಮತದಾರರ ಒಲವು ದಿನೇ ದಿನೇ ಹೆಚ್ಚುತ್ತಿದೆ. ಮೋದಿ ಅಲೆ, ಯುವಕರು ಬಿಜೆಪಿಯತ್ತ ಒಲವು ತೋರುವುದರಿಂದ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22 ಸ್ಥಾನ ಗಳನ್ನು ಗೆಲ್ಲಲಿದೆ. ಶ್ರೀನಿವಾಸ್ ಪ್ರಸಾದ್ ಕನಿಷ್ಠ ಒಂದೂವರೆ ಲಕ್ಷ ಮತಗಳ ಅಂತರ ದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ರಾಜಕಾರಣದಿಂದ ಪಕ್ಷದ ಅಭ್ಯರ್ಥಿ ಸೋತರು. ಈ ಬಾರಿಯ ಅಭ್ಯರ್ಥಿ 5 ಬಾರಿ ಸಂಸತ್ ಸದಸ್ಯರಾಗಿದ್ದಾರೆ. ಮತದಾರರಿಗೆ ಚ್ಯುತಿ ತಂದಿಲ್ಲ. ಹಾಗಾಗಿ ಗೆಲ್ಲುವ ವಿಶ್ವಾಸ ಇದೆ ಎಂದರು.

ಸಂಚಾಲಕ ಎಸ್.ಬಾಲಸುಬ್ರಹ್ಮಣ್ಯಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ, ತಾಲೂಕು ಅಧ್ಯಕ್ಷ ಸುಂದರಪ್ಪ, ನಗರ ಘಟಕ ಅಧ್ಯಕ್ಷ ಸುಂದರ್ ರಾಜ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.