ಕೊಡಗಿನ ನೆರೆ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗೋಳು ಶೌಚಾಲಯ, ಸ್ನಾನಗೃಹ ಕೊರತೆಯಿಂದ ನಲುಗಿದ ಜೀವಗಳು

ಮಡಿಕೇರಿ:  ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆ ಇಂದಿಗೂ ಮಹಾ ಪ್ರಳಯದ ಕರಾಳ ಛಾಯೆಯಿಂದ ಹೊರಬಂದಿಲ್ಲ. ವರುಣನ ಹೊಡೆತದಿಂದ ಸಂಪೂರ್ಣ ಮಂಡಿಯೂರಿರುವ ಕೊಡಗಿನಲ್ಲಿ ಅತೀ ಹೆಚ್ಚು ಹಾನಿಗೆ ತುತ್ತಾಗಿರುವ ಮಡಿಕೇರಿ ತಾಲೂಕು ಮತ್ತು ಸುತ್ತ-ಮುತ್ತಲಿನ ಗ್ರಾಮಗಳಿಂದ ನಿರಾಶ್ರಿತರ ಕೇಂದ್ರಗಳತ್ತ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಭೂ ಕುಸಿತ, ಪ್ರವಾಹ ಮತ್ತು ಪಕೃತಿ ವಿಕೋಪಗಳಿಂದ ಮನೆ, ಗ್ರಾಮ, ಊರು ತೊರೆದವರನ್ನು ಸಮೀಪದ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ದಾಖಲಿಸಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ನಿರಾಶ್ರಿತ ಕೇಂದ್ರಗಳಲ್ಲಿ ಅಂದಾಜು 7 ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ. ಇಂತಹ ನಿರಾಶ್ರಿತ ಕೇಂದ್ರಗಳು ಸರಕಾರಿ ಶಾಲೆ ಮತ್ತು ಸಮುದಾಯ ಭವನಗಳಾಗಿದ್ದು, ಇಲ್ಲಿರುವ ಮೂಲಭೂತ ಸೌಕರ್ಯಗಳ ಅವ್ಯವಸ್ಥೆಗಳು ನಿರಾಶ್ರಿತರನ್ನು ಮತ್ತಷ್ಟು ಸಂಕಷ್ಟದ ಕೂಪಕ್ಕೆ ತಳ್ಳಿದೆ. ಕೆಲವೆಡೆ ಶೌಚಾಲಯ ವ್ಯವಸ್ಥೆ ಮತ್ತು ಸ್ನಾನಗೃಹಗಳು ಕೂಡ ಇಲ್ಲವಾಗಿದ್ದು, ಸರ್ವಸ್ವವನ್ನು ಕಳೆದುಕೊಂಡವರಿಗೆ ತಾವು ಬದುಕಿದ್ದಾದರೂ ಯಾಕೆ? ಎನ್ನುವ ಜಿಗುಪ್ಸೆ ಮೂಡಿದೆ. ನಿರಾಶ್ರಿತರ ಕೇಂದ್ರದಲ್ಲಿ ಕನಿಷ್ಟ 50 ರಿಂದ 700 ಮಂದಿ ಆಶ್ರಯ ಪಡೆದಿದ್ದು, ಅವರನ್ನು ನಿಭಾಯಿಸುವುದು ನಿರಾಶ್ರಿತರ ಕೇಂದ್ರದ ಸ್ವಯಂ ಸೇವಕರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಗೆ ಸವಾಲಾಗಿ ಕಾಡುತ್ತಿದೆ.

ಅದರೊಂದಿಗೆ ಗರ್ಭಿಣಿಯರು, ಬಾಣಂತಿಯರು,ಹಾಲು ಕುಡಿಯುವ ಕಂದಮ್ಮಗಳೊಂದಿಗೆ ವಯೋವೃದ್ಧರೂ ಕೂಡ ನಿರಾಶ್ರಿತ ಕೇಂದ್ರಗಳಲ್ಲಿದ್ದು, ಅವರ ಆರೈಕೆ, ಔಷಧೋಪಚಾರಗಳು ಸಂಕಷ್ಟದ ಸರಮಾಲೆಯನ್ನೆ ಹೊದಿಸಿದೆ.

ಆಹಾರಕ್ಕೆ ತಲೆದೋರಲಿದೆ ಹಾಹಾಕಾರ : ರಾಜ್ಯದೆಲ್ಲೆಡೆಯಿಂದ ನೆರೆ ಸಂತ್ರಸ್ತರಿಗೆ ಸಹಾಯದ ರೂಪದಲ್ಲಿ ಆಹಾರ, ಧಾನ್ಯ, ಬಟ್ಟೆ ಔಷಧಿ ಲಭ್ಯವಾಗಿದೆ. ಆದರೆ ಈ ಸಹಾಯ ಕೆಲ ಸಮಯಗಳಿಗೆ ಮಾತ್ರ ಸೀಮಿತವಾಗಲಿದ್ದು, ಮಳೆ ಮುಂದುವರಿದರೆ ಮುಂದೇನು ಎಂಬ ಪ್ರಶ್ನೆಯೂ ಕಾಡತೊಡಗಿದೆ. ಪ್ರಸ್ತುತ ಪೂರೈಕೆಯಾಗಿರುವ ಆಹಾರ ಧಾನ್ಯಗಳು ಹೆಚ್ಚೆಂದರೆ 15ದಿನಗಳು ಕಾಲ ನಿರಾಶ್ರಿತರಿಗೆ ನೆರವಾಗಬಹುದು. ಆದರೆ ಮನೆ, ಸ್ವತ್ತು, ಜಮೀನು, ತೋಟ ಕಳೆದು ಕೊಂಡು ಬೀದಿಗೆ ಬಿದ್ದವರ ಪಾಡು ಸದ್ಯಕ್ಕಂತೂ ಮುಗಿಯದ ಅಧ್ಯಾಯದಂತಿದೆ. ಪರಿಸ್ಥಿತಿ ಹೀಗಿರುವಾಗ ಎಲ್ಲಿಯವರೆಗೆ ನೆರವು ದೊರೆಯಬಹುದು ಎಂಬ ಯಕ್ಷ ಪ್ರಶ್ನೆ ಉದ್ಬವಿಸುತ್ತದೆ. ಸರಕಾರದಿಂದ ಈ ಪ್ರಮಾಣದ ನೆರವು ಅಸಾಧ್ಯವಾಗಿದ್ದು, ಎಲ್ಲೆಲ್ಲೂ ಆಹಾರಕ್ಕಾಗಿ ಹಾಹಾಕಾರ ಕೇಳಿ ಬರಲಿದ್ದು, ಪರಿಸ್ಥಿತಿ ಸಂಪೂರ್ಣ ಬಿಗಡಾ ಯಿಸುವ ಲಕ್ಷಣವೂ ಗೋಚರಿಸುತ್ತಿದೆ.

ಮುಂದಿದೆ ಭಾರಿ ಸವಾಲು : ರಣ ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಮತ್ತಷ್ಟು ಮನೆಗಳು ಭೂ ಸಮಾಧಿಯಾಗಲು ತಯಾರಾಗುತ್ತಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳಾದೇವಿ ನಗರ ಮತ್ತಿತ್ತರ ಕಡೆಗಳಲ್ಲಿ ನೂರಾರು ಮನೆಗಳ ಮೇಲೆ ಭೂ ಸಹಿತ ಕುಸಿದು ಪ್ರಪಾತಕ್ಕೆ ಉರುಳಿವೆ. ಈ ಸ್ಥಳಗಳಲ್ಲಿ ಉರುಳಿಹೋದ ಮನೆಗಳ ಕುರುಹುಗಳು ಕೂಡ ಇಂದು ಉಳಿದಿಲ್ಲ. ಮಾತ್ರವಲ್ಲದೆ, ಮಕ್ಕಂದೂರು, ಕಾಲೂರು, ದೇವಸ್ತೂರು ಕಡೆಗಳಲ್ಲಿ ಕಾಫಿ ತೋಟ,ಮನೆಗಳು ಕೂಡ ಭೂಕುಸಿತದಲ್ಲಿ ಭೂಗರ್ಭ ಸೇರಿದೆ. ಹೀಗಾಗಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಮಹತ್ತರ ಜವಾಬ್ದಾರಿ ರಾಜ್ಯ ಸರಕಾರ ಮತ್ತು ಜಿಲ್ಲಾಡ ಳಿತದ ಮೇಲಿದೆ. ಮನೆ ಕಳೆದು ಕೊಂಡವ ರಿಗೆ ಪರ್ಯಾಯ ಸ್ಥಳ ಗುರುತಿಸುವುದು ಕೂಡ ಕಷ್ಟ ಸಾಧ್ಯವಾಗಿದ್ದು, ಭವಿಷ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ವಿಕೋಪಕ್ಕೆ ತಿರುಗುವ ಲಕ್ಷಣಗಳು ಕಂಡು ಬರುತ್ತಿದೆ.