ಅಂತರಸಂತೆಯಲ್ಲಿ ನಾಳೆ ಜೀವ ವೈವಿಧ್ಯ ಹಬ್ಬ ಮಳೆ ಆಶ್ರಿತ ರೈತರ ಸಂಗಮ ಕಾರ್ಯಕ್ರಮ

ಮೈಸೂರು, ಜ.1(ಆರ್‍ಕೆಬಿ)- ಪೀಪಲ್ ಟ್ರೀ ಸಂಸ್ಥೆ ಮತ್ತು ಸಿರಿಧಾನ್ಯ ಸಂಪರ್ಕ ಜಾಲವು ಜ.3ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಜೀವ ವೈವಿಧ್ಯ ಹಬ್ಬ ಮತ್ತು ಮಳೆ ಆಶ್ರಿತ ರೈತರ ಸಂಗಮ ಕಾರ್ಯಕ್ರಮ ಆಯೋಜಿಸಿದೆ.

ಸಿರಿಧಾನ್ಯಗಳಿಗೆ ಮಹತ್ವ ನೀಡುವುದು, ಕೃಷಿ ಸಂಬಂಧಿತ ಅಧಿಕಾರಿಗಳೊಂದಿಗೆ ಕಾರ್ಯ ಕ್ರಮದ ವಿವರ ನೀಡುವುದು, ರೈತರು ಮತ್ತು ಅಧಿಕಾರಿಗಳ ಸಮನ್ವಯತೆಯ ಸಹಯೋಗ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಕೃಷಿ ಸಂಶೋಧನಾ ಸಂಯೋಜಕ ಎಲ್.ಸಿ.ಚೆನ್ನರಾಜು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಳೆ ಆಶ್ರಿತ ಒಣಭೂಮಿ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಭಾರತ ಸಿರಿಧಾನ್ಯ ಸಹೋದರಿಯರ ಸಂಪರ್ಕ ಜಾಲ ಕಾರ್ಯಕ್ರಮ 15 ರಾಜ್ಯಗಳ ಮಹಿಳೆಯರ ಮುಂದಾಳತ್ವದಲ್ಲಿ ಅನುಷ್ಠಾನವಾಗುತ್ತಿದೆ. ಇದರ ಭಾಗವಾಗಿ ಪೀಪಲ್ ಟ್ರೀ ಸಂಸ್ಥೆ ಹೆಗ್ಗಡದೇವನಕೋಟೆಯಲ್ಲಿ ಆದಿವಾಸಿ ಮತ್ತು ಸಣ್ಣ ರೈತ ಮಹಿಳೆಯರ ಜೊತೆ ಸೇರಿ ಸಿರಿಧಾನ್ಯ ಸಹೋದರಿಯರ ಗುಂಪುಗಳನ್ನು ರಚಿಸಿ, ಸಿರಿಧಾನ್ಯ ಆಧಾರಿತ ವೈವಿಧ್ಯ ಮಿಶ್ರಬೆಳೆ ಪದ್ಧತಿಗಳ ಮೂಲಕ ಪೌಷ್ಟಿಕ ಆಹಾರ ಬೆಳೆಗಳ ಉತ್ಪಾದನೆ ಹೆಚ್ಚಳ ಮಾಡಿ ಕುಟುಂಬಗಳ ಆಹಾರ ಭದ್ರತೆಗೆ ನೆರವಾಗುತ್ತಿದೆ ಎಂದರು.

ಕೃಷಿ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಿರಿಧಾನ್ಯ ಸಹೋದರಿಯರ ಗುಂಪುಗಳನ್ನು ರಚಿಸಿ, ಸುತ್ತು ನಿಧಿಯನ್ನು ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿ ರಚನೆಗೆ ಚಾಲನೆ ನೀಡಿ, ಸ್ಥಳೀಯ ಕೃಷಿ ವೈವಿಧ್ಯ ಮತ್ತು ಜೀವ ವೈವಿಧ್ಯತೆ ದಾಖಲೆ ಮಾಡುವ ಜೊತೆಗೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳು ಭಾಗವಹಿಸುವಂತೆ ಮಾಡಬೇಕು. ಸಿರಿಧಾನ್ಯ ಬೆಳೆ ಬೆಳೆಯಲು ಸಿರಿಧಾನ್ಯ ಸಹೋದರಿಯರ ಗುಂಪುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಕಾರ್ಯಸೂಚಿ ರೂಪಿಸಬೇಕು ಎಂದು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪೀಪಲ್ ಟ್ರೀ ಸಿರಿಧಾನ್ಯ ಸಂಸ್ಥೆಯ ಗೌರಮ್ಮ, ಸವಿತಾ, ಜಯಲಕ್ಷ್ಮಿ ಉಪಸ್ಥಿತರಿದ್ದರು.