ಪ್ರವಾಸಿಗರಿಗೆ ಸೆ.9ರವರೆಗೆ ಕೊಡಗು ಪ್ರವೇಶ ನಿಷಿದ್ಧ

ಮಡಿಕೇರಿ: ಸುರಕ್ಷತೆಯ ದೃಷ್ಟಿಯಿಂದ ಆಗಸ್ಟ್ 31ರವರೆಗೆ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಹೇರ ಲಾಗಿದ್ದ ನಿಷೇಧವನ್ನು ಸೆಪ್ಟೆಂಬರ್ 9 ರವರೆಗೆ ಮುಂದುವರಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆ ಪರಿಸ್ಥಿತಿಯಿಂದ 32 ಗ್ರಾಮಗಳು ಭೂ ಕುಸಿತದಿಂದ ನೆಲಸಮವಾಗಿದ್ದವು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಹಲವು ಗ್ರಾಮಗಳು ಇದೀಗ ಮರಣ ಕೂಪಗಳಾಗಿ ಮಾರ್ಪಟ್ಟಿವೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದರೂ ಅಲ್ಲಲ್ಲಿ ಇನ್ನೂ ಮಳೆಯಾಗುತ್ತಿದೆ. ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲೆಗೆ ಆದ ಹಾನಿಯನ್ನು ವೀಕ್ಷಿಸಲು ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿದ್ದರು. ಭೂ ಕುಸಿದ ಪ್ರದೇಶ, ತುಂಡಾದ ರಸ್ತೆ ಸೇರಿದಂತೆ ಅಪಾಯಕಾರಿ ಸ್ಥಳಗಳಿಗೂ ತೆರಳಿ ಪ್ರಕೃತಿ ವಿಕೋಪದಿಂದ ಘಟಿಸಿದ ಅನಾಹುತಗಳನ್ನು ನೋಡಲು ಮುಂದಾಗಿದ್ದರು. ಮಾತ್ರವಲ್ಲದೆ ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿದ್ದು, ಕೆಲವು ರಸ್ತೆಗಳಲ್ಲಿ ಇಂದಿಗೂ ವಾಹನ ಸಂಚಾರ ಅಸಾಧ್ಯವಾಗಿ ಪರಿಣಮಿಸಿದೆ. ಕೆಲವೆಡೆ ರಸ್ತೆಗಳಿಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಚೆಕ್‍ಪೋಸ್ಟ್: ಜಿಲ್ಲೆಯ ಗಡಿ ಪ್ರದೇಶ ಗಳಾದ ಕುಶಾಲನಗರ, ಸಂಪಾಜೆ, ಕೊಡ್ಲಿಪೇಟೆ, ಪೆರುಂಬಾಡಿ, ಮಾಕುಟ್ಟ ಚೆಕ್‍ಪೋಸ್ಟ್ ಗಳಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ವಾಹನಗಳನ್ನು ತಡೆ ಹಿಡಿಯಲಾಗುತ್ತಿದೆ. ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಭೂ ಕುಸಿತ ಪರಿಸ್ಥಿತಿಯಿಂದ ಪ್ರವಾಸಿಗರಿಗೆ ಅಪಾಯವಾಗುವ ಸಾಧ್ಯತೆ ಇರುವುದರ ಬಗ್ಗೆ ತಿಳಿ ಹೇಳಿ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಮಾತ್ರವಲ್ಲದೆ ಭೂ ಕುಸಿತ, ತುಂಡಾದ ಹೆದ್ದಾರಿ, ಅಪಾಯ ಕಾರಿ ಕಣಿವೆ ಪ್ರದೇಶಗಳನ್ನು ಒಳಗೊಂಡಿ ರುವ 32 ಗ್ರಾಮಗಳಲ್ಲೂ ಪೊಲೀಸ್ ಚೆಕ್‍ಪೋಸ್ಟ್ ಅಳವಡಿಸಲಾಗಿದೆ. ಸ್ಥಳೀಯ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ಮಾತ್ರ ಈ ರಸ್ತೆಗಳನ್ನು ಮುಕ್ತಗೊಳಿಸಲಾಗಿದ್ದು, ಪ್ರವಾಸಿ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.