ಯಾವುದೇ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಮುಖ್ಯ

ಮೈಸೂರು,ಜ.9(ಪಿಎಂ)-ದಲಿತ ಸಮು ದಾಯದ ಸಬಲೀಕರಣಕ್ಕಾಗಲೀ ಇಲ್ಲವೇ ಯಾವುದೇ ಯೋಜನೆಯಾದರೂ ಅನು ಷ್ಠಾನ ಹಂತದಲ್ಲಿ ಪಾರದರ್ಶಕತೆ ಇದ್ದರೆ ಉದ್ದೇಶ ಈಡೇರಲು ಸಾಧ್ಯ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದ ಸಂಸದ ವಿ.ಶ್ರೀನಿ ವಾಸ ಪ್ರಸಾದ್, ಸರ್ಕಾರದ ಯೋಜನೆ ಗಳ ಪ್ರಯೋಜನ ಪಡೆದುಕೊಳ್ಳಲು ದಲಿತ ಸಮುದಾಯ ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು.

ಮೈಸೂರಿನ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾ ಡೆಮಿ, ಮುಕ್ತ ವಿವಿ ಜಂಟಿ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ `ದಲಿತ ಕಲ್ಯಾಣ : ಸವಾಲು ಮತ್ತು ಅವಕಾಶಗಳು’ ಕುರಿತಂತೆ ಹಮ್ಮಿಕೊಂಡಿರುವ 5 ದಿನಗಳ ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಯೋಜನೆಯಾದರೂ ಕೇವಲ ಕೋಟಿಗಟ್ಟಲೇ ವೆಚ್ಚ ಮಾಡಿದರಷ್ಟೇ ಪ್ರಯೋ ಜನವಿಲ್ಲ. ಅನುಷ್ಠಾನ ಹಂತದಲ್ಲಿ ಪಾರ ದರ್ಶಕತೆ ಇಲ್ಲವಾದರೆ ಯಶಸ್ಸು ಕಾಣ ಲಾಗದು. ಜೀತದಾಳು ಪದ್ಧತಿ ರದ್ದತಿ ಕಾಯ್ದೆ ಜಾರಿಗೊಂಡಾಗ ಫಲಾನುಭವಿಗಳಿಗೆ ಪುನರ್ ವಸತಿ ಕಲ್ಪಿಸುವ ನೆಪದಲ್ಲಿ ಮಧ್ಯ ವರ್ತಿಗಳು ಹಾಗೂ ಅಧಿಕಾರಿಗಳು ಯೋಜನೆ ಯನ್ನು ದುರುಪಯೋಗ ಮಾಡಿಕೊಂ ಡಿದ್ದೂ ನಡೆಯಿತು. ಹೀಗಾಗಿ ಅನುಷ್ಠಾನ ಹಂತ ಬಹುಮುಖ್ಯವಾದದ್ದು ಎಂದರು.

ಜಾತಿ ವ್ಯವಸ್ಥೆ ಹಾಗೂ ಅಸ್ಪøಶ್ಯತೆ ಇಂದಿಗೂ ಜೀವಂತವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ವಿಷಾದ ವ್ಯಕ್ತ ಪಡಿಸಿದ್ದರು. ದಲಿತ ಸಮುದಾಯ ಮೊದಲು ತಮ್ಮಲ್ಲಿನ ಆಂತರಿಕ ಶತೃಗಳನ್ನು ಸಂಹಾರ ಮಾಡಿಕೊಳ್ಳಬೇಕಿದೆ. ಮದ್ಯಪಾನ ಸೇರಿ ದಂತೆ ಯಾವುದೇ ದುಶ್ಚಟಗಳಿದ್ದಲ್ಲಿ ಅವು ಗಳಿಂದ ಮುಕ್ತರಾಗಬೇಕು. ಎರಡು ಮಕ್ಕ ಳಿಗೆ ಸೀಮಿತವಾಗಿ ಅವರಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ಜೊತೆಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ವಿಶೇಷ ಘಟಕ ಯೋಜನೆ ಎಂದಾಕ್ಷಣ ನಾನು ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾದ ದಿನಗಳು ನೆನಪಾಗುತ್ತವೆ. ದಲಿತ ಸಮುದಾಯದ ಕಲ್ಯಾಣಕ್ಕಾಗಿ ಅಂದು ಕೇಂದ್ರ ಸಚಿವರಾಗಿದ್ದ ಯೋಗೇಂದ್ರ ಮಕ್ವಾನ ಅವರ ಶಿಫಾರಸ್ಸಿನ ಮೇರೆಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿಶೇಷ ಘಟಕ ಯೋಜನೆ ಜಾರಿಗೊಳಿಸಿದರು. ಪ್ರಾಚೀನ ಕಾಲದಿಂ ದಲೂ ಭಾರತದಲ್ಲಿ ಕಠೋರವಾದ ಜಾತಿ ವ್ಯವಸ್ಥೆ ಇದ್ದು, ಅದು ಇಂದಿಗೂ ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಅಂದಿನಿಂದ ಅಸ್ಪø ಶ್ಯತೆ ನೋವು ದಲಿತರ ಶೋಚನೀಯ ಪರಿ ಸ್ಥಿತಿಯಲ್ಲಿ ಇರಿಸಿದೆ. ಗ್ರಾಮೀಣ ಪ್ರದೇಶ ದಲ್ಲಿ ಅಸ್ಪøಶ್ಯತೆ ತಾಂಡವವಾಡುತ್ತಿದ್ದರೆ, ನಗರ ಪ್ರದೇಶದಲ್ಲಿ ಇಂದಿಗೂ ದಲಿತರು ಕೊಳಗೇರಿಗಳಲ್ಲಿ ಬದುಕುವಂತಹ ದುಸ್ಥಿತಿ ತಪ್ಪಿಲ್ಲ ಎಂದು ವಿಷಾದಿಸಿದರು.

ಭಾರತದ ಇತಿಹಾಸ ಪುಟಗಳನ್ನು ನೋಡಿ ದಾಗ ಹಲವು ಸಮಾಜ ಸುಧಾರಕರು ಅಪಾರವಾಗಿ ಜಾತಿ ವ್ಯವಸ್ಥೆ ನಿರ್ಮೂ ಲನೆಗೆ ಶ್ರಮಿಸಿರುವುದು ಕಾಣುತ್ತದೆ. ಆದರೆ ಪರಿವರ್ತನೆ ಮಾತ್ರ ಪೂರ್ಣ ಪ್ರಮಾಣ ದಲ್ಲಿ ಇಂದಿಗೂ ಆಗುತ್ತಲೇ ಇಲ್ಲ. ಯಾವ ತಪ್ಪು ಇಲ್ಲದಿದ್ದರೂ ದಲಿತ ಸಮುದಾಯಕ್ಕೆ ಅಸ್ಪøಶ್ಯತೆಯ ಶಿಕ್ಷೆ ನೀಡಲಾಗಿದೆ. ಅಸ್ಪøಶ್ಯತೆ ನಿರ್ಮೂಲನೆಗಾಗಿ ಇಡೀ ರಾಷ್ಟ್ರದಲ್ಲಿ ದೊಡ್ಡ ಮಟ್ಟದ ಚಳವಳಿ ರೂಪಿಸುವಂತೆಯೂ ಇತ್ತೀಚೆಗೆ ಕೃಷ್ಣೈಕ್ಯರಾದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದ್ದೆ ಎಂದು ಸ್ಮರಿಸಿದರು.

ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕ ಹುದ್ದೆಗೆ ಎಲ್ಲಾ ಸಮುದಾಯದವ ರಿಗೆ ಮುಕ್ತ ಅವಕಾಶ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿದ್ದು ನೋವಿನ ಸಂಗತಿ. ಸರ್ಕಾರಿ ನೌಕರಿ ಕಡಿಮೆ ಆಗುತ್ತಿದ್ದು, ಖಾಸಗಿ ವಲಯದಲ್ಲೂ ಮೀಸಲಾತಿ ಬೇಕೆಂದು ಈ ಹಿಂದೆಯೇ ಪ್ರತಿಪಾದಿಸಿದ್ದೇನೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ 30 ವರ್ಷದೊಳಗಿನ 50 ಮಂದಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ. ಶಾಸಕ ಎಲ್.ನಾಗೇಂದ್ರ, ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾ ಶಂಕರ್, ಕುಲಸಚಿವ ಡಾ.ಬಿ.ರಮೇಶ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಕರ್ನಾಟಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ರಿಜಿಸ್ಟ್ರಾರ್ ಎನ್.ಕರಿಯಪ್ಪ, ಕಮ್ಮಟದ ನಿರ್ದೇಶಕ ಡಾ.ಯಲ್ಲಪ್ಪ ಕೆ.ಕೆ.ಪುರ ಮತ್ತಿತರರು ಹಾಜರಿದ್ದರು.