ಕೈ ಮುಗಿತೀನಿ, ಬಡ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕಲ್ಪಿಸಿ: ಬಿಎಸ್‍ವೈ

ಬೆಂಗಳೂರು,ಡಿ.11(ಕೆಎಂಶಿ)- ಕೆಲಸದ ಸಮಯದಲ್ಲಿ ರೋಗಿ ಗಳನ್ನು ನೋಡುವುದನ್ನು ಬಿಟ್ಟು ಹೊರಗಡೆ ಸುತ್ತುವುದು ನಿಮ್ಮ ವೃತ್ತಿಗೆ ಶೋಭೆ ತರುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.

ಆರ್ಥಿಕವಾಗಿ ದುರ್ಬಲರಾದವರು ಚಿಕಿತ್ಸೆಗಾಗಿ ನಿಮ್ಮನ್ನು ಅವ ಲಂಬಿತರಾಗಿರುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ನ್ಯಾಯ ಕಲ್ಪಿಸಿದರೆ ಅದಕ್ಕಿಂತ ಬೇರೆ ಪುಣ್ಯ ಕಾರ್ಯವಿಲ್ಲ. ನಿಮ್ಮ ಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಬಡ ರೋಗಿಗಳನ್ನು ನಿರ್ಲ ಕ್ಷಿಸಬೇಡಿ. ಸರ್ಕಾರ ನೀಡಿದ ಸವಲತ್ತುಗಳನ್ನು ಅವರಿಗೆ ಒದಗಿಸಿ, ಉತ್ತಮ ಚಿಕಿತ್ಸೆ ನೀಡಿ ಎಂದರು. ನಗರದ ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ, ಮಿಂಟೋ ಆಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಮಾನವೀಯತೆಯಿಂದ ಕಾಣಿರಿ. ನೀವು ಯಾವುದೇ ಆರೋಪಗಳಿಗೆ ಅವಕಾಶ ಕೊಡದೆ ಶ್ರದ್ಧೆಯಿಂದ ಒಳರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದು ಸೂಚ್ಯವಾಗಿ ಹೇಳಿದರು. 100ಕ್ಕೆ 50 ಜನ ರೋಗಿಗಳಿಗೆ ಒಂದಲ್ಲ ಒಂದು ರೀತಿ ಕಿರುಕುಳ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಅವಕಾಶ ನೀಡದೆ ಶ್ರದ್ಧೆಯಿಂದ ನೀವು ಕೆಲಸ ಮಾಡಿ. ಇಂದು ಸರ್ಕಾರಿ ಆಸ್ಪತ್ರೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿವೆ. ಅದೇ ರೀತಿ ವಿಕ್ಟೋರಿಯಾ ಆಸ್ಪತ್ರೆಯ ಕೀರ್ತಿ ಪತಾಕೆ ಹಾರಿಸಬೇಕೆಂಬುದು ನನ್ನ ಆಶಯ ವಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನ ಕೊಡುವುದು ಹೆಚ್ಚಲ್ಲ. ಈ ಅನುದಾನ ಸದ್ಬಳಕೆಯಾಗಬೇಕು. ಆ ರೀತಿ ರೋಗಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳ ಬೇಕೆಂದು ಸಿಎಂ ಸಲಹೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾ ಯಣ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳೆಂದರೆ ಮೊದಲು ಜನರು ಮೂಗು ಮುರಿಯುತ್ತಿದ್ದರು. ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಮೂಲಭೂತ ಸೌಕರ್ಯಗಳಿಲ್ಲ ಮುಂತಾದ ನೆಪ ಹೇಳಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು.ಇಂದು ನಮ್ಮ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಿದೆ. ಕೇವಲ ಕಟ್ಟಡ ಕಟ್ಟಿದರೆ ಸಾಲದು ರೋಗಿಗಳಿಗೆ ಬೇಕಾದ ಹಾಸಿಗೆ, ಶೌಚಾಲಯ, ಔಷಧೋಪಚಾರಗಳು, ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ಒಡ್ಡುವಂತಹ ಚಿಕಿತ್ಸೆ ನೀಡಬೇಕು. ಇದು ವೈದ್ಯರ ಮೇಲಿದೆ ಎಂದು ತಿಳಿಸಿದರು.