ಸಾಮಾಜಿಕ ಅಂತರ ಕಾಪಾಡುವಲ್ಲಿ ಗಿರಿಜನರು ಮೊದಲಿಗರು

ಯಳಂದೂರು,ಏ.24-ಲಾಕ್‍ಡೌನ್‍ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಗಿರಿಜನರು ಮೊದಲಿಗರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಿರಿಜನರ ಕಾಲೋನಿಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದೆ. ಈ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಸಮರ ಸಾರಿದೆ. ಇದಕ್ಕೆ ಮನೆಯಲ್ಲಿರುವುದೇ ಮದ್ದು. ಸರ್ಕಾರ ಲಾಕ್‍ಡೌನ್ ಮಾಡಿದ್ದು ಇದಕ್ಕೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ಈ ನಿಟ್ಟಿನಲ್ಲಿ ಕಾಡಿನಲ್ಲಿ ವಾಸ ಮಾಡುವ ಬುಡಕಟ್ಟು ಸೋಲಿಗ ಜನಾಂಗದವರು ಮೊದಲಿನಿಂದಲೇ ಇತರೆ ಜನರ ಜೊತೆ ಬೆರೆಯು ವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ತಮ್ಮ ಪೋಡುಗಳಿಗೆ ತಾವೇ ಇತರರಿಗೆ ನಿರ್ಬಂಧ ವಿಧಿಸಿಕೊಂಡು ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭ ದೇಶಕ್ಕೆ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದೆ. ಇಂತಹ ಸಂದರ್ಭ ಬಡಜನರು, ನಿರ್ಗತಿಕರು, ಗಿರಿಜನರು ಕೂಲಿಯನ್ನೇ ನೆಚ್ಚಿಕೊಂಡು ಬದುಕಿರುವ ಮಂದಿಗೆ ಹೆಚ್ಚಿನ ತೊಂದರೆಯಾಗಿದೆ. ಸರ್ಕಾರ ಇವರಿಗೆ ನೆರವು ನೀಡಿದ್ದರೂ ಇದು ಸಾಲದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಿಗುವ ಧವಸಧಾನ್ಯ, ಹೊರತುಪಡಿಸಿ ಇತರೆ ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ಕಿಟ್‍ಗಳ ರೂಪದಲ್ಲಿ ಜಿಲ್ಲಾದ್ಯಂತ ನೀಡಲು ಪಕ್ಷ ತೀರ್ಮಾ ನಿಸಿದೆ. ಈ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡು, ಯರಕನಗದ್ದೆಪೋಡು, ಪುರಾಣಿ, ಮುತ್ತುಗದಗದ್ದೆ, ಈರಣ್ಣಯ್ಯನಕಟ್ಟೆ, ಹೊಸ ಪೋಡು ಸೇರಿದಂತೆ 8 ಪೋಡುಗಳಲ್ಲಿ ವಾಸ ಮಾಡುವ 724 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸ ಲಾಗುತ್ತಿದೆ. ಇದರೊಂದಿಗೆ ಬೆಟ್ಟದಲ್ಲಿ ವಾಸ ಮಾಡುವ ಇತರೆ ಜನಾಂಗದ ಕೂಲಿ ಕಾರ್ಮಿಕರಿಗೂ ಇದನ್ನು ವಿತರಿಸಲು ಕ್ರಮ ವಹಿಸಲಾಗಿದೆ ಎಂದರು. ಈ ವೇಳೆ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲ ರಾಜು, ಜಿಪಂ ಸದಸ್ಯರಾದ ಜೆ.ಯೋಗೇಶ್, ಸದಾ ಶಿವಮೂರ್ತಿ, ಮಾಜಿ ಸದಸ್ಯರಾದ ಕೇತಮ್ಮ, ವಡಗೆರೆ ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ತಾಪಂ ಅಧ್ಯಕ್ಷ ನಿರಂಜನ್, ನಂಜಯ್ಯ, ಗುಂಬಳ್ಳಿ ನಂಜಯ್ಯ, ಕೃಷ್ಣಾಪುರ ದೇವರಾಜು, ಚಂದ್ರು ಇತರರಿದ್ದರು.