ಹೆಚ್‍ಡಿಕೆಯಿಂದ ತೊಘಲಕ್ ದರ್ಬಾರ್: ಯಡಿಯೂರಪ್ಪ

ಮಳವಳ್ಳಿ: ರೈತರ ಸಾಲ ಮನ್ನಾ ಮಾಡುವುದಾಗಿ 5 ತಿಂಗಳಿನಿಂದ ಬೊಬ್ಬೆ ಹೊಡೆಯುತ್ತಾ ಕಾಲಹರಣ ಮಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ಪಟ್ಟಣದ ಕನಕದಾಸ ಕ್ರೀಡಾಂಗಣ ದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕುಮಾರಸ್ವಾಮಿ ಅವರು ಸಾಲಮನ್ನಾ ವಿಚಾರದಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಜೊತೆಗೆ, ಯಡಿಯೂರಪ್ಪ ಒಂದು ಸಮು ದಾಯದ ಓಲೈಕೆ ಮಾಡುತ್ತಿದ್ದಾರೆ ಎಂದು ಲಘುವಾಗಿ ಮಾತನಾಡುವ ಮೂಲಕ ತಮ್ಮ ನಾಲಿಗೆಯನ್ನು ಎಲುಬಿಲ್ಲದೆ ಹರಿದು ಬಿಟ್ಟು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ನನ್ನ ಅಧಿಕಾರಾವಧಿಯಲ್ಲಿ ಲಕ್ಷಾಂ ತರ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಸೌಲಭ್ಯದ ಬಾಂಡ್ ನೀಡಿದ್ದೇನೆ. ಆದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 5 ತಿಂಗಳಾದರು ಒಂದೇ ಒಂದು ಬಾಂಡ್ ಸಹ ನೀಡಿಲ್ಲ. ಎಲ್ಲಿಗೆ ಹೋಯಿತು ಜನರ ತೆರಿಗೆ ಹಣ? ಏಕೆ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕರಾದ ಅಶ್ವಥ್‍ನಾರಾಯಣಗೌಡ, ಮಾರುತಿರಾವ್ ಪವಾರ್, ಅಜೀಂ, ಬಿಜೆಪಿ ಉಸ್ತುವಾರಿ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಶಿವಸ್ವಾಮಿ ಇದ್ದರು.

ಶಿವರಾಮೇಗೌಡರನ್ನು ಕೋತಿಗೆ ಹೋಲಿಕೆ

ಮಂಡ್ಯ:  ಭಾಷಣದ ಭರಾಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವ ರಾಮೇಗೌಡರನ್ನು ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್ ಕೋತಿಗೆ ಹೋಲಿಕೆ ಮಾಡಿ ವಾಗ್ದಾಳಿ ಮಾಡಿದರು.

ನಾಗಮಂಗಲದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಯಾವುದಾದರೂ ಕಾಯಿಲೆ ಬಂದಾಗ ಔಷಧಿ ಕಂಡು ಹಿಡಿಯುತ್ತಾರೆ. ಆ ಔಷಧಿಯನ್ನು ಕೋತಿ ಮೇಲೆ ಪ್ರಯೋಗ ಮಾಡ್ತಾರೆ. ಅದು ಬದುಕಿದರೆ, ಆ ಮೇಲೆ ಮನುಷ್ಯರಿಗೆ ಚಿಕಿತ್ಸೆ ಕೊಡುತ್ತಾರೆ. ಅದೇ ರೀತಿ ಶಿವರಾಮೇಗೌಡರನ್ನು ಪ್ರಯೋಗ ಮಾಡಿ ಅಭ್ಯರ್ಥಿ ಮಾಡಿದ್ದಾರೆ ಎಂದು ಜೆಡಿಎಸ್ ವರಿಷ್ಠರನ್ನು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ: ವಿಶ್ವಾಸ

ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ನಗರಕೆರೆ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಬಹಿರಂಗ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಜನ ಬದಲಾವಣೆ ಬಯಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕುವರೆ ವರ್ಷಗಳ ಆಡಳಿತವನ್ನು ಮೆಚ್ಚಿ ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 6 ತಿಂಗಳು ಕಳೆದಿದ್ದರೂ ರೈತರ ಸಾಲಮನ್ನಾ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸದೆ ಜನರಿಗೆ ಕಣ್ಣೊರೆಸುವ ತಂತ್ರವನ್ನು ಕುಮಾರಸ್ವಾಮಿ ಅವರು ಅನುಸರಿಸು ತ್ತಿದ್ದಾರೆ ಎಂದು ದೂರಿದರು.

ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಶಾಸಕರಾದ ಈ.ಅಶ್ವಥ್ ನಾರಾಯಣ್, ಶಿವಣ್ಣಗೌಡ, ನಾರಾಯಣಸ್ವಾಮಿ, ಶಿವಣ್ಣ, ಸುರೇಶ್‍ಗೌಡ, ಕೃಷ್ಣಪ್ಪ, ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಬಿ. ನಾಗಣ್ಣಗೌಡ, ತಾಲೂಕು ಅಧ್ಯಕ್ಷ ರಘು, ಮುಖಂಡರಾದ ಮಲ್ಲಿ ಕಾರ್ಜುನ್, ಜಿ.ಸಿ.ಮಹೇಂದ್ರ, ಎಂ.ಸಿ.ಸಿದ್ದು ಹಾಜರಿದ್ದರು.