ಮೈಸೂರು,ಜು.30(ಪಿಎಂ)- ಮುಂಬ ರುವ ಶೈಕ್ಷಣಿಕ ಸಾಲಿನಿಂದ 100 ಸೀಟು ಹೆಚ್ಚುವರಿ ಲಭ್ಯವಾಗುವ ನಿರೀಕ್ಷೆಯಲ್ಲಿ ರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‍ಐ) ಎಂಬಿಬಿಎಸ್ ವಿದ್ಯಾರ್ಥಿ ಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಈಗಾಗಲೇ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ವಿದೆ. ಸದ್ಯ ಸಂಸ್ಥೆಯ ಎಂಬಿಬಿಎಸ್ ಪದವಿ ಯಲ್ಲಿ 150 ಸೀಟುಗಳು ಲಭ್ಯವಿದ್ದು, ಈ ವಿದ್ಯಾರ್ಥಿಗಳಿಗೆ ಮೈಸೂರಿನ ಜೆಎಲ್‍ಬಿ ರಸ್ತೆಯ ಮುಡಾ ಕಚೇರಿ ಎದುರು ಪುರುಷರ ಹಾಸ್ಟೆಲ್ ಹಾಗೂ ಕೆಆರ್‍ಎಸ್ ರಸ್ತೆಯಲ್ಲಿ ಮಹಿಳೆಯರ ಹಾಸ್ಟೆಲ್ ವ್ಯವಸ್ಥೆ ಇದೆ.
ಇದೀಗ ಮುಂದಿನ ಶೈಕ್ಷಣಿಕ ಸಾಲಿ ನಿಂದ 150ರಿಂದ 250ಕ್ಕೆ ಎಂಬಿಬಿಎಸ್ ಸೀಟುಗಳನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಹೆಚ್ಚಿಸಿದಲ್ಲಿ ನೂತನ ಹಾಸ್ಟೆಲ್ ನಿರ್ಮಾಣದಿಂದ ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ. ಎರಡು ಹಾಸ್ಟೆಲ್ ಹಾಗೂ ಒಂದು ಗ್ರಂಥಾಲಯ ಸೇರಿದಂತೆ ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ ಈ ಪ್ರತ್ಯೇಕ ಮೂರು ಕಟ್ಟಡಗಳು ತಲೆ ಎತ್ತಲಿವೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಎಂಎಂಸಿ ಆರ್‍ಐ ನಿರ್ದೇಶಕ ಮತ್ತು ಡೀನ್ ಡಾ. ನಂಜರಾಜ್, ಕಾಲೇಜು ಆವರಣದಲ್ಲಿ ರುವ ಸ್ನಾತಕೋತ್ತರ ಪದವಿ ಪುರುಷರ ಹಾಸ್ಟೆಲ್ ಬಳಿ ಎಂಬಿಬಿಎಸ್ ಪುರುಷರ ಹಾಸ್ಟೆಲ್ ಹಾಗೂ ಗ್ರಂಥಾಲಯ ನಿರ್ಮಾಣ ವಾಗಲಿದೆ. ಕೆಆರ್‍ಎಸ್ ರಸ್ತೆಯಲ್ಲಿ ಈಗಾ ಗಲೇ ಇರುವ ಎಂಬಿಬಿಎಸ್ ಮಹಿಳೆ ಯರ ಹಾಸ್ಟೆಲ್ ಆವರಣದಲ್ಲಿ ಮತ್ತೊಂದು ವಿಸ್ತøತ ಕಟ್ಟಡ ನಿರ್ಮಿಸಿ ಎಂಬಿಬಿಎಸ್ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಎರಡೂ ಹಾಸ್ಟೆಲ್‍ಗಳಲ್ಲಿ ತಲಾ 150 ಕೊಠಡಿ ಇರಲಿದ್ದು, ಒಂದೊಂದು ಕೊಠಡಿ ಯಲ್ಲಿ ಮೂವರಿಗೆ ಅವಕಾಶ ಕಲ್ಪಿಸುವಂತೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಉದ್ದೇಶಿತ ಪುರುಷರ ಹಾಸ್ಟೆಲ್ ನಿರ್ಮಿ ಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಇದರ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ವಿವರಿಸಿದರು.