ಇನ್ನೂ ಪ್ರಕಟವಾಗದ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ

ಕಾಂಗ್ರೆಸ್-ಜೆಡಿಎಸ್‍ಗೆ ಅವಕಾಶ ತಪ್ಪಿಸಿ ಈ ಬಾರಿ  ಅಧಿಕಾರ ಹಿಡಿಯಲು ಬಿಜೆಪಿ ತೆರೆಮರೆ ಪ್ರಯತ್ನ
ಮೈಸೂರು, ಡಿ.16(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫೀ ಅಹಮದ್ ಅವರ ಒಂದು ವರ್ಷದ ಅಧಿಕಾರಾವಧಿ ಮುಗಿದಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

ಈ ಕುರಿತಂತೆ ಸರ್ಕಾರ ಮೀಸಲಾತಿ ನಿಗದಿಗೊ ಳಿಸಿ, ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದ್ದು, ಅದ ಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸದಸ್ಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾಪಕ್ಷದ ಮುಖಂಡರು, ಸದಸ್ಯರು ಮೀಸಲಾತಿ ಪಟ್ಟಿಗೆ ವಿವಿಧ ವರ್ಗವಾರು ಮುಖಂಡರು ತಮ್ಮ ವರ್ಗಕ್ಕೆ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗಿದೆ.
ಕಳೆದ ವರ್ಷ 2018ರಲ್ಲಿ ಮೈತ್ರಿ ಸರ್ಕಾರ ಇದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಮೇಯರ್ ಮತ್ತು ಜೆಡಿಎಸ್‍ನ ಶಫೀ ಅಹಮದ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರ ಒಂದು ವರ್ಷದ ಅವಧಿ ಕಳೆದ ನ.16ರಂದೇ ಪೂರ್ಣಗೊಂಡಿದ್ದರೂ, ಹುಣಸೂರು ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಅವರಿಗೆ ಮುಂದಿನ ಮೇಯರ್, ಉಪಮೇಯರ್ ಆಯ್ಕೆ ಆಗುವವರೆಗೆ ಮುಂದುವರಿಯಲು ಅವಕಾಶ ಸಿಕ್ಕಂತಾಗಿದೆ.

65 ವಾರ್ಡ್‍ಗಳ ಮೈಸೂರು ಮಹಾ ನಗರಪಾಲಿಕೆಯಲ್ಲಿ ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್‍ಪಿ-1 ಮತ್ತು ಪಕ್ಷೇತರರು-5 ಸದಸ್ಯರಿದ್ದಾರೆ. ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿ ಮುಖಂಡರು, ಈ ಬಾರಿ ರಾಜ್ಯದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಹೇಗಾದರೂ ಸರಿ ತಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಅಧಿಕಾರ ಹಿಡಿಯಲು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. ಇತ್ತ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಮತ್ತು ಮುಖಂಡರು ಯಾವುದೇ ಕಾರಣಕ್ಕೂ ಈ ಬಾರಿಯೂ ಬಿಜೆಪಿಗೆ ಅವಕಾಶ ಸಿಗದಂತೆ ಮಾಡಿ ಮತ್ತೆ ಮೈತ್ರಿ ಸಾಧಿಸಿ, ನಗರಪಾಲಿಕೆ ಅಧಿಕಾರ ಹಿಡಿಯಲು ಮುಂದಾಗಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮೂರೂ ಪಕ್ಷಗಳು ನಗರಪಾಲಿಕೆ ಅಧಿಕಾರಕ್ಕಾಗಿ ಈಗಿ ನಿಂದಲೇ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ಅದೆಲ್ಲವೂ ಮೀಸಲಾತಿ ಪಟ್ಟಿ ಮತ್ತು ಚುನಾವಣಾ ದಿನಾಂಕ ಪ್ರಕಟಣೆ ಮೇಲೆ ಅವಲಂಬಿಸಿದೆ.