ಸ್ವಾತಂತ್ರ್ಯಕ್ಕಾಗಿ ಸಾಹಸ ಮೆರೆದ ಸಾಕಾರಮೂರ್ತಿ ನೇತಾಜಿಯವರ ಸಂದೇಶಗಳ ಅನಾವರಣ

ಮೈಸೂರು, ಜ.23(ಪಿಎಂ)- `ಭಾರತೀಯರ ವಿಮುಕ್ತಿಗಾಗಿ ನನ್ನ ಜೀವನವನ್ನೇ ಕೊಡುತ್ತೇನೆ…’ ಇದು ದೇಶದ ಸ್ವಾತಂತ್ರ್ಯಕ್ಕಾಗಿ ಸಾಹಸ ಮೆರೆದ ಸಾಕಾರಮೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವೀರವಾಣಿ. ಸುಭಾಷ್ ಚಂದ್ರ ಬೋಸ್ ಅವರ ಇಂತಹ ಹತ್ತು ಹಲವು ಘೋಷ ವಾಕ್ಯಗಳು ಅಲ್ಲಿ ರಾರಾಜಿಸುವ ಮೂಲಕ ಅವರ ವಿಚಾರಗಳನ್ನು ಪಸರಿಸಿದವು.

ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿ ಕೊಂಡಿದ್ದ ಅವರ ಛಾಯಾಚಿತ್ರ ಸಹಿತ ಘೋಷ ವಾಕ್ಯಗಳ ಪ್ರದರ್ಶನದ ಚಿತ್ರಣವಿದು.

ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ಹಾಗೂ ಎಐಡಿ ವೈಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್) ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೇತಾಜಿಯವರ ಮೇರು ವ್ಯಕ್ತಿತ್ವ, ಸಾಹಸಮಯ ಹೋರಾಟ ಹಾಗೂ ಕೊಡುಗೆಗಳ ಅನಾವರಣ ಕಂಡು ಬಂದಿತು.

ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ. ನೇತಾಜಿಯವರ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಕೇವಲ ರಾಜಕೀಯ ಸ್ವಾತಂತ್ರವಷ್ಟೇ ಆಗಿರದೇ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವೂ ಆಗಿತ್ತು. ನೇತಾಜಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಯಶಸ್ಸು ಗಳಿಸಲು ಹಿಂದೂ ಹಾಗೂ ಮುಸ್ಲಿಂ ಒಗ್ಗಟ್ಟು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.

ಎಐಡಿವೈಓ ಜಂಟಿ ಕಾರ್ಯದರ್ಶಿ ಸುಮಾ ಮಾತನಾಡಿ, ದೇಶದಲ್ಲಿ ಇಂದಿಗೂ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಬಡವರಿಗೆ ಶಿಕ್ಷಣ ಮರೀಚಿಕೆಯಾಗಿ ಪರಿಣಮಿ ಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಜವಾಬ್ದಾರಿ ಮರೆತು ಧರ್ಮ-ಜಾತಿ ಹೆಸರಿ ನಲ್ಲಿ ಜನತೆಯನ್ನು ವಿಭಜಿಸಿ ಸ್ವಾರ್ಥ ರಾಜಕೀಯ ಮಾಡುತ್ತಿವೆ. ಹಿಂದೂ ಮತ್ತು ಮುಸ್ಲಿಂ ಎಂದು ಪ್ರತ್ಯೇಕಿಸುವವರನ್ನು ದೂರವಿಡಿ ಎಂದು ಅಂದೇ ನೇತಾಜಿಯವರು ಕರೆ ಕೊಟ್ಟಿದ್ದರು. ಹೀಗಾಗಿ ನೇತಾಜಿಯವರ ಜನ್ಮ ದಿನವನ್ನು ನಾವಿಂದು ಕೋಮು ಸೌಹಾರ್ದ ದಿನವಾಗಿ ಆಚರಿಸುತ್ತಿದ್ದೇವೆ ಎಂದರು. ಎಐಡಿಎಸ್‍ಓ ಉಪಾಧ್ಯಕ್ಷ ಆಸಿಯಾ ಬೇಗಂ, ಎಐಡಿವೈಓ ಜಿಲ್ಲಾಧ್ಯಕ್ಷ ಹರೀಶ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.