ಫೆ.16ಕ್ಕೆ ಉತ್ತನಹಳ್ಳಿ ಅಮ್ಮನ ಜಾತ್ರೆ

ಮೈಸೂರು,ಫೆ.4(ಎಂಟಿವೈ)- ಸರ್ಕಾರಿ ಉತ್ತನಹಳ್ಳಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿ ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ತೆರೆಬಿದ್ದಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಕ್ಯಾಲೆಂಡರ್ ನಲ್ಲಿ ನಮೂದಾಗಿರುವಂತೆ ಫೆ.16ರಂದೇ ಜಾತ್ರೆ ನಡೆಸಲು ಒಕ್ಕೊರಲಿನಿಂದ ಸಮ್ಮತಿಸಲಾಯಿತು.

2020ರ ಕ್ಯಾಲೆಂಡರ್‍ನಲ್ಲಿ ಉತ್ತನಹಳ್ಳಿಯ ಈ ಸಾಲಿನ ಜಾತ್ರಾ ಮಹೋತ್ಸವ ಫೆ.16 ರಂದು ಪ್ರಕಟವಾಗಿತ್ತು. ಆದರೆ ಅರಮನೆ ಸಂಪ್ರದಾಯದಂತೆ ಫೆ.9ರಂದು ಜಾತ್ರಾ ಮಹೋತ್ಸವ ನಡೆಯಬೇಕಿತ್ತು. ಈ ಹಿನ್ನೆಲೆ ಯಲ್ಲಿ ಜಾತ್ರಾ ಸಂಬಂಧ ಗೊಂದಲ ಸೃಷ್ಟಿಯಾಗಿತ್ತು. ಸೋಮವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ, 1868 ರಿಂದಲೂ ಅರಮನೆ ಪಂಚಾಂಗದಂತೆ ಪ್ರತಿವರ್ಷ ಮಾಘ ಮಾಸದ ಮೂರನೇ ಭಾನುವಾರದಂದೇ ಶ್ರೀಜ್ವಾಲಾಮುಖಿ ತ್ರಿಪುರ ಸುಂದರಿ ವರ್ಧಂತಿ ಮಹೋತ್ಸವ ನಡೆಸುವುದು ಸಂಪ್ರದಾಯ. ಇದರಂತೆ ಫೆ.9ರಂದು ಉತ್ತನಹಳ್ಳಿ ಜಾತ್ರೆ ನಡೆಯಬೇಕಿತ್ತು. ಆದರೆ ಕ್ಯಾಲೆಂಡರ್‍ನಲ್ಲಿ ಫೆ.16ರಂದು ಉತ್ತನಹಳ್ಳಿ ಜಾತ್ರೆ ಎಂದು ದಾಖಲಾಗಿರುವುದರಿಂದ ಗ್ರಾಮಸ್ಥರು ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಅಲ್ಲದೆ ಫೆ.9ರಂದು ಜ್ವಾಲಾ ಮುಖಿ ತ್ರಿಪುರ ಸುಂದರಿ ದೇವಿಗೆ ವಧರ್Àಂತಿ ಪೂಜೆ ಕಡ್ಡಾಯವಾಗಿ ನಡೆಸಲೇಬೇಕು ಎಂದು ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿ ಮಧ್ಯಪ್ರವೇಶ: ಜಾತ್ರೆ ಆಚ ರಣೆ ದಿನಾಂಕಕ್ಕೆ ಸಂಬಂಧಿಸಿ ಉಂಟಾಗಿದ್ದ ಗೊಂದಲದಿಂದಾಗಿ ಇಂದು ಬೆಳಿಗ್ಗೆ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಅವರು ಮುಜರಾಯಿ ತಹಶೀಲ್ದಾರ್ ಯತಿರಾಜು, ಉತ್ತನಹಳ್ಳಿ ಗ್ರಾಮಸ್ಥರು ಹಾಗೂ ದೇವಾ ಲಯಗಳ ಅರ್ಚಕರೊಂದಿಗೆ ಸಭೆ ನಡೆಸಿದರು.

ಗ್ರಾಮಸ್ಥರ ಮನವಿ ಆಲಿಸಿದ ಜಿಲ್ಲಾಧಿ ಕಾರಿ, ಆಗಮಿಕರ ಸಭೆ ನಡೆಸಿ, ಅವರ ಅಭಿಪ್ರಾಯ ಕೇಳಿಕೊಂಡು ಜಾತ್ರೆ ದಿನಾಂಕ ಅಂತಿಮಗೊಳಿಸುವಂತೆ ಮುಜರಾಯಿ ಇಲಾಖೆ ತಹಸಿಲ್ದಾರ್ ಯತಿರಾಜು ಅವರಿಗೆ ಸೂಚನೆ ನೀಡಿದರು. ಮಂಗಳವಾರ ಸಂಜೆ ನಡೆದ ಆಗಮಿಕರ ಸಭೆಯಲ್ಲಿ ಫೆ.16 ರಂದು ಜಾತ್ರೆ ನಡೆಸಬಹುದು ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಜಿಲ್ಲಾಧಿಕಾರಿಗಳು ಫೆ.16ರಂದು ಜಾತ್ರೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಬಿಗಿಪೆÇಲೀಸ್ ಬಂದೋ ಬಸ್ತ್ ಹಾಗೂ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

ನಾಟಕ ಪ್ರದರ್ಶನ: ಉತ್ತನಹಳ್ಳಿ ಜಾತ್ರೆ ಪ್ರಯುಕ್ತ ಫೆ.17ರ ಸೋಮವಾರ ರಾತ್ರಿ 9.30ಕ್ಕೆ ಶ್ರೀ ಶನೈಶ್ಚರಸ್ವಾಮಿ ಭಕ್ತ ಮಂಡಳಿ ಯಿಂದ `ಮಹಿಷಾಸುರ ಮರ್ದಿನಿ’ ಪೌರಾ ಣಿಕ ನಾಟಕ, ಏಳಿಗೆಹುಂಡಿಯಲ್ಲಿ ಕನಕ ದಾಸ ಯುವಕರ ಬಳಗದಿಂದ `ಭೂಮಿ ತೂಕದ ಹೆಣ್ಣು’ ಸಾಮಾಜಿಕ ನಾಟಕ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ `ದಕ್ಷಯಜ್ಞ’ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಗ್ರಾಪಂ ಸದಸ್ಯ ಶಿವಬೀರ, ಮಾಜಿ ಸದಸ್ಯ ಬಸವರಾಜು, ಜೆ.ಮರಿಯಪ್ಪ, ಶಿವಣ್ಣ, ಜೆ.ಗೋಪಿ, ಮಂಜು, ಬಿ.ಯಶವಂತ ಕುಮಾರ್, ಪಿ.ರಾಜು ಸಭೆಯಲ್ಲಿದ್ದರು.